ಚೆನ್ನೈ,ಜ.18 (DaijiworldNews/AK): ತಮಿಳಿನ ನಟ ವಿಶಾಲ್ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಕೈ ನಡುಗುತ್ತಿರುವ ಸ್ಥಿತಿ ಕಂಡು ಫ್ಯಾನ್ಸ್ ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ಅನಾರೋಗ್ಯದ ವಿಡಿಯೋ ನೋಡಿ ಅನೇಕರು ಕಾಲೆಳೆದಿದ್ದರು. ಈಗ ವಿಶಾಲ್ ಗುಣಮುಖರಾಗಿದ್ದಾರೆ. ಹಾಗಾಗಿ ಸಿನಿಮಾದ ಸಮಾರಂಭವೊಂದರಲ್ಲಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.
‘ಮದಗಜರಾಜ’ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಭಾಗಿಯಾದ ವಿಶಾಲ್ ಅವರು ಮೈಕ್ ಅನ್ನು ಕೈಗೆ ಎತ್ತಿಕೊಳ್ಳುತ್ತಲೇ ಅವರ ಕೈ ನಡುಗಲು ಶುರುವಾಯ್ತು. ಕೂಡಲೇ ಇನ್ನೊಂದು ಕೈಯಿಂದ ನಡುಗುತ್ತಿರುವ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಅಯ್ಯೋ ಏನಿದು ನಡುಗುತ್ತಿರುವುದು ನಿಲ್ಲುತ್ತಲೇ ಇಲ್ಲವಲ್ಲ ಎಂದರು. ಮತ್ತೆ ಈ ವಿಡಿಯೋ ಯೂಟ್ಯೂಬ್ನಲ್ಲಿ ವೈರಲ್ ಆಗಲ್ಲ ಅಲ್ವಾ? ಎಂದು ತಮಾಷೆಯಾಗಿ ಮಾತನಾಡಿದರು. ಈ ಮೂಲಕ ಟ್ರೋಲ್ ಮಾಡಿದವರಿಗೆ ನಟ ಟಾಂಗ್ ಕೊಟ್ಟಿದ್ದಾರೆ.
12 ವರ್ಷಗಳ ಹಿಂದೆ ರಿಲೀಸ್ ಆಗಬೇಕಿದ್ದ ಸಿನಿಮಾ ‘ಮದಗಜರಾಜ’ ಜ.12ಕ್ಕೆ ರಿಲೀಸ್ ಆಗಿತ್ತು. ಇದರ ಪ್ರಿ- ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ವೇಳೆ ವಿಶಾಲ್ ಮೈಕ್ ಹಿಡಿಯಲು ಆಗದಷ್ಟೂ ಕೈ ನಡಗುತ್ತಿತ್ತು. ಮಾತುಗಳು ತೊದಲುತ್ತಿದ್ದವು. ವಿಶಾಲ್ ಆರೋಗ್ಯ ಹದಗೆಟ್ಟಂತೆ ಕಂಡು ಬಂತು. ಅವರ ಕಣ್ಣುಗಳಿಂದ ಕಣ್ಣೀರು ಉಮ್ಮಳಿಸಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಹಾಗಾಗಿ ನಟ ಇದೀಗ ಟ್ರೋಲಿಗೆ ತಿರುಗೇಟು ನೀಡಿದ್ದಾರೆ.
ಅಭಿಮಾನಿಗಳು ಆತಂಕಕ್ಕೆ ಒಳಗಾಗದೇ ಇರಲಿ ಎಂದು ನನಗೆ ವೈರಲ್ ಫೀವರ್ ಬಂದಿದೆ ಎಂದು ವಿಶಾಲ್ ತಿಳಿಸಿದರು.