ಬೆಂಗಳೂರು, ಮಾ.01(DaijiworldNews/TA): 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಶನಿವಾರ ಬೆಂಗಳೂರಿನ ವಿಧಾನಸೌಧದಲ್ಲಿ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಉತ್ಸವವನ್ನು ಉದ್ಘಾಟಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿರುವ ಸಿನಿಮಾ ಕುರಿತು ಐದು ಪುಸ್ತಕಗಳನ್ನು ಕನ್ನಡ ನಟ ಶಿವರಾಜ್ಕುಮಾರ್ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಿದರು. ಇಂದಿನಿಂದ 8 ದಿನಗಳ ಕಾಲ ಚಲನಚಿತ್ರೋತ್ಸವ ನಡೆಯಲಿದೆ. 60ಕ್ಕೂ ಹೆಚ್ಚು ವಿದೇಶಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ದೇಶ- ವಿದೇಶಗಳ ಸಿನಿಮಾ ಪ್ರದರ್ಶನ ಕಾಣಲಿದೆ ಎಂದು ಹೇಳಲಾಗಿದೆ.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆಜೆ ಜಾರ್ಜ್, ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲಾ, ನಟ ಶಿವರಾಜ್ ಕುಮಾರ್, ರಾಯಭಾರಿ ಕಿಶೋರ್ ಕುಮಾರ್, ಎಂಎಲ್ಸಿ ನಜೀರ್ ಅಹಮದ್, ಶಾಸಕರಾದ ರಿಜ್ವಾನ್ ಅರ್ಷದ್, ಗೋವಿಂದ್ ರಾಜ್, ಸಲೀಂ ಅಹಮದ್, ಉಮಾಶ್ರೀ, ನಟಿ ಪ್ರಿಯಾಂಕಾ ಮೋಹನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.