ನವದೆಹಲಿ, ಮೇ. 31 (DaijiworldNews/AK): ಕಿರುತೆರೆ, ಹಿರಿತೆರೆಯಲ್ಲಿ ಮಿಂಚಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಈ ಮೂಲಕ ಫ್ಯಾನ್ಸ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್ 2’ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಶೂಟಿಂಗ್ ವೇಳೆ ಅವರಿಗೆ ಝೆಡ್ ಕ್ಯಾಟಗರಿ ಭದ್ರತೆ ನೀಡಲಾಗಿದೆ. ಅವರೊಂದಿಗೆ ಅಮರ್ ಉಪಾಧ್ಯಾಯ ಕೂಡ ನಟಿಸಿದ್ದಾರೆ. ಅಮರ್ ಅವರು ಸ್ಮೃತಿಗೆ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’ ಸೀಸನ್ 1ರಲ್ಲಿ ಪತಿಯಾಗಿ ನಟಿಸಿದ್ದರು.
2000ರಲ್ಲಿ ಪ್ರಸಾರವಾಗಿದ್ದ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’ ಸೀಸನ್ 1ರಲ್ಲಿ ಸ್ಮೃತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 8 ವರ್ಷಗಳ ಕಾಲ ಈ ಸೀರಿಯಲ್ ಪ್ರಸಾರವಾಗಿತ್ತು. ಏಕ್ತಾ ಕಪೂರ್ ಈ ಸೀರಿಯಲ್ ನಿರ್ಮಿಸಿದ್ದರು. ಆ ನಂತರ ಅವರು ರಾಜಕೀಯದಲ್ಲಿ ಬ್ಯುಸಿಯಾಗಿದ್ದರು. ಇದೀಗ 12 ವರ್ಷಗಳ ನಂತರ ಸೀರಿಯಲ್ ಜಗತ್ತಿಗೆ ಮತ್ತೆ ಪ್ರವೇಶಿಸಿದ್ದಾರೆ.