ಒಟ್ಟಾವಾ, ಜು. 10 (DaijiworldNews/AA): ಕೆನಡಾದಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆಫೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಅದರ ಮೇಲೆ ಖಲಿಸ್ತಾನ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.

ಈ ಗುಂಡಿನ ದಾಳಿಯ ಹೊಣೆಯನ್ನು ಖಲಿಸ್ತಾನಿ ಭಯೋತ್ಪಾದಕ ಹರ್ಜೀತ್ ಸಿಂಗ್ ಲಡ್ಡಿ ಹೊತ್ತಿಕೊಂಡಿದೆ. ಈ ದಾಲಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕೆಫೆ ಮೇಲೆ ಕನಿಷ್ಠ ಒಂಬತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.
ಕ್ಯಾಪ್ಸ್ ಕೆಫೆ ಎಂದು ಕರೆಯಲ್ಪಡುವ ಈ ಕೆಫೆ, ರೆಸ್ಟೋರೆಂಟ್ ಉದ್ಯಮದಲ್ಲಿ ಶರ್ಮಾ ಅವರ ಮೊದಲ ಪ್ರಯತ್ನವಾಗಿದೆ. ಅವರ ಪತ್ನಿ ಗಿನ್ನಿ ಚತ್ರತ್ ಕೂಡ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಈ ಕೆಫೆಯನ್ನು ಕೆಲವು ದಿನಗಳ ಹಿಂದಷ್ಟೇ ಉದ್ಘಾಟನೆ ಮಾಡಲಾಗಿತ್ತು.
ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಕೆಫೆಯ ಕಿಟಕಿಯ ಮೇಲೆ ಕನಿಷ್ಠ ಒಂಬತ್ತು ಗುಂಡುಗಳನ್ನು ಹಾರಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಲಡ್ಡಿ ಭಯೋತ್ಪಾದನಾ ವಿರೋಧಿ ಸಂಸ್ಥೆ ಎನ್ಐಎಯ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದಾನೆ. ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಾಸ್ಯನಟನ ಹೇಳಿಕೆಯಿಂದ ಮನನೊಂದಿದ್ದರಿಂದ ಅವನು ಗುಂಡಿನ ದಾಳಿಗೆ ಆದೇಶಿಸಿದ್ದಾನೆ ಎಂದು ಹೇಳಲಾಗಿದೆ. ಇನ್ನು ಗುಂಡಿನ ದಾಳಿಯ ನಂತರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಯುತ್ತಿದೆ.