ಬೆಂಗಳೂರು, ಆ. 19 (DaijiworldNews/TA): ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಾಯಕನಾಗಿ ಮಿಂಚುತ್ತಿರುವ ಬಹು ನಿರೀಕ್ಷಿತ ಕನ್ನಡ ಚಿತ್ರ ‘ಕಾಂತಾರ: ಚಾಪ್ಟರ್ 1’ ದಿನದಿಂದ ದಿನಕ್ಕೆ ಹೊಸ ಸುದ್ದಿಗಳಿಂದ ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಿದೆ. ಇತ್ತೀಚೆಗೆ ನಟಿ ರುಕ್ಮಿಣಿ ವಸಂತ್ ಅವರ ಪಾತ್ರವನ್ನು ಬಹಿರಂಗಪಡಿಸಿದ್ದ ಹೊಂಬಾಳೆ ಫಿಲ್ಮ್ಸ್, ಈಗ ಮತ್ತೊಂದು ಭರ್ಜರಿ ಅಪ್ಡೇಟ್ ನೀಡಿದೆ.

ಕನ್ನಡ ಮೂಲದ ಬಾಲಿವುಡ್ ನಟ ಗುಲ್ಷನ್ ದೇವಯ್ಯ, ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು "ಕುಲಶೇಖರ" ಎಂಬ ಶಕ್ತಿಶಾಲಿ ಪಾತ್ರವನ್ನು ಅಭಿನಯಿಸುತ್ತಿದ್ದು, ಪೌರಾಣಿಕ ರಾಜನಂತೆ ಸಿಂಹಾಸನದ ಮೇಲೆ ಕುಳಿತಿರುವ ಅವರ ಫಸ್ಟ್ಲುಕ್ ಈಗಾಗಲೇ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಗುಲ್ಷನ್ ದೇವಯ್ಯ ಯಾರು? : ಬೆಂಗಳೂರು ಮೂಲದ ಗುಲ್ಷನ್ ದೇವಯ್ಯ, ಪೋಷಕರಿಗೆ ಶಿಕ್ಷಕರಾಗಿದ್ದವರ ಮಗನಾಗಿದ್ದು, ತಮ್ಮ ಪ್ರಾರಂಭಿಕ ದಿನಗಳಲ್ಲಿ ಪ್ರಸಾದ್ ಬಿದಪ್ಪ ಅವರ ಬಳಿ ಮಾಡೆಲಿಂಗ್ ತರಬೇತಿ ಪಡೆದವರು. ಮೊದಲಬಾರಿಗೆ 2004 ರಲ್ಲಿ ಸಲ್ಮಾನ್ ಖಾನ್ ಅಭಿನಯದ ದಿಲ್ ನೆ ಜಿಸೆ ಅಪ್ನಾ ಕಹಾ ಚಿತ್ರದಲ್ಲಿ ಕಿರುಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ 2010 ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ The Girl in Yellow Boots ಚಿತ್ರದ ಮೂಲಕ ಪ್ರಖ್ಯಾತಿಗೆ ಬಂದರು.
ಅವರ ವಿಶೇಷತೆ ಎಂದರೆ, ಪದೇಪದೆ ಕಮರ್ಶಿಯಲ್ ಚಿತ್ರಗಳಿಗೆ ಹೋಗದೆ, ವಿಭಿನ್ನ ಕಥಾ ಹಂದರಗಳಿರುವ ಸಿನಿಮಾಗಳನ್ನು ಆಯ್ಕೆಮಾಡುವುದು. ರಾಮ್ ಲೀಲಾ,ಮರ್ದ್ ಕೋ ದರ್ದ್ ನಹಿ ಹೊತಾ, ಹಂಟರ್, ಧಮ್ ಮಾರೋ ಧಮ್, ಡೆತ್ ಇನ್ ಗಂಜ್ ಮುಂತಾದ ವಿಶಿಷ್ಟ ಸಿನಿಮಾಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ.
ಈಗಾಗಲೇ ಚಿತ್ರದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಮಲಯಾಳಂ ನಟ ಜಯರಾಮ್ ಸೇರಿದಂತೆ ಹಲವರು ಪಾತ್ರವಹಿಸುತ್ತಿದ್ದಾರೆ. ಇದೀಗ ಗುಲ್ಷನ್ ದೇವಯ್ಯ ಅವರು ಕೂಡ ಸೇರ್ಪಡೆಗೊಂಡಿದ್ದು, ಚಿತ್ರದ ಮಟ್ಟವನ್ನೇ ಹೆಚ್ಚಿಸಿದೆ. ಜೊತೆಗೆ, ಇತ್ತೀಚೆಗೆ ನಿಧನರಾದ ಹಾಸ್ಯ ನಟ ರಾಕೇಶ್ ಪೂಜಾರಿ ಅವರೂ ಈ ಚಿತ್ರದಲ್ಲಿ ಭಾಗವಹಿಸಿದ್ದನ್ನು ನಿರ್ಮಾಪಕರು ದೃಢಪಡಿಸಿದ್ದಾರೆ.
'ಕಾಂತಾರ: ಚಾಪ್ಟರ್ 1' ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಥಿಯೇಟರ್ಗಳಿಗೆ ಬರಲಿದ್ದು, ಇದು 2022ರಲ್ಲಿ ಬಿಡುಗಡೆಯಾದ ಮೊದಲ "ಕಾಂತಾರ" ಚಿತ್ರದ ಪ್ರಿಕ್ವೆಲ್ ಆಗಿರಲಿದೆ. ಪೌರಾಣಿಕ, ನೈಸರ್ಗಿಕ, ಮತ್ತು ಸಂಸ್ಕೃತಿಯ ಮಿಶ್ರಣವನ್ನು ಹೊಂದಿರುವ ಈ ಚಿತ್ರ, ಹಿಂದಿನ ಹಂತವನ್ನು ಉಲ್ಲೇಖಿಸುತ್ತಾ ಆಳವಾದ ಕಥಾಹಂದರವನ್ನು ತೆರೆದಿಡಲಿದೆ ಎನ್ನಲಾಗಿದೆ.