ಬೆಂಗಳೂರು, ಆ. 29 (DaijiworldNews/AA): ಕ್ಯಾನ್ಸರ್ನಿಂದ ಬಳಲುತ್ತಿರುವ ಹಿರಿಯ ನಟ ಹರೀಶ್ ರಾಯ್ ಅವರು ತಮ್ಮ ಚಿಕಿತ್ಸೆಗಾಗಿ ಆರ್ಥಿಕ ನೆರವಿಗಾಗಿ ಸಹಾಯವನ್ನ ಕೇಳಿದ್ದರು. ಈ ವಿಡಿಯೋ ವೈರಲ್ ಆ ಬೆನ್ನಲ್ಲೇ ನಟ ಧ್ರುವ ಸರ್ಜಾ ಅವರು ನಟ ಹರೀಶ್ ರಾಯ್ ಸಹಾಯಕ್ಕೆ ನಿಂತಿದ್ದಾರೆ.

ಹರೀಶ್ ಅವರ ಆಸ್ಪತ್ರೆಯ ಖರ್ಚನ್ನ ಭರಿಸುವುದಾಗಿ ಧ್ರುವ ಸರ್ಜಾ ಹೇಳಿದ್ದಾರೆ. ಇದರ ಬೆನ್ನಲ್ಲೇ ಈ ಬಗ್ಗೆ ವಿಡಿಯೋ ಮೂಲಕ ನಟ ಧ್ರುವ ಸರ್ಜಾ ಅವರಿಗೆ ಹರೀಶ್ ಅವರು ಧನ್ಯವಾದ ತಿಳಿಸಿದ್ದಾರೆ.
ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಹೊಟ್ಟೆಗೆ ಹರಡಿ ಈಗ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ಅವರು ಗುಣಮುಖರಾಗುತ್ತಾರೆ ಎಂದು ವೈದ್ಯರು ಭರವಸೆ ನೀಡಿದ್ದಾರೆ.
ಹರೀಶ್ ರಾಯ್ ಅವರಿಗೆ ನೀಡಬೇಕಾದ ಚಿಕಿತ್ಸೆ ದುಬಾರಿಯಾಗಿದ್ದು, ಅವರಿಗೆ ನೀಡಬೇಕಾದ ಒಂದೊಂದು ಇಂಜೆಕ್ಷನ್ ಬೆಲೆ ಮೂರುವರೆ ಲಕ್ಷ ರೂಪಾಯಿಗಳದ್ದು. ಜೊತೆಗೆ ಹರೀಶ್ ರಾಯ್ ಅವರಿಗೆ ತುರ್ತಾಗಿ ಚಿಕಿತ್ಸೆ ಕೂಡಾ ಪ್ರಾರಂಭಿಸಬೇಕಿದೆ ಎಂದು ವೈದ್ಯರು ಸಲಹೆ ನೀಡಿದ್ದಾರಂತೆ. ಈ ಹಿನ್ನೆಲೆ ಅವರು ಚಿತ್ರರಂಗದವರ ನೆರವನ್ನ ಕೇಳಿದ್ದರು.