ಮುಂಬೈ, ಸೆ. 09 (DaijiworldNews/AA): ಡ್ಯಾನ್ಸರ್ ಹಾಗೂ ನಟಿ ಧನಶ್ರೀ ವರ್ಮ ಹಾಗೂ ಕ್ರಿಕೆಟರ್ ಯಜುವೇಂದ್ರ ಚಹಲ್ ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿ ಇತ್ತೀಚೆಗಷ್ಟೇ ವಿಚ್ಛೇದನ ಪಡೆದು ದೂರಾಗಿದ್ದಾರೆ. ವಿಚ್ಛೇದನದ ಬಳಿಕ ಚಹಲ್ ಅವರು ಧನಶ್ರೀ ಅವರನ್ನು ಪರೋಕ್ಷವಾಗಿ ಸಾಕಷ್ಟು ಟೀಕೆ ಮಾಡಿದ್ದರು. ಇದರ ಬೆನ್ನಲ್ಲೇ 'ಚಹಲ್ಗೂ ಅವಮಾನ ಮಾಡಬಹುದಿತ್ತು, ಗಂಡ ಆಗಿದ್ದ ಅಂತ ಸುಮ್ನೆ ಇದೀನಿ' ಎಂದು ಧನಶ್ರೀ ಖಡಕ್ ವಾರ್ನಿಂಗ್ ನೀಡಿದ್ದಾರೆ.

'ಧನಶ್ರೀ ಹಣಕ್ಕಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ' ಎಂದು ಚಹಲ್ ಅವರು ಪರೋಕ್ಷವಾಗಿ ಹೇಳಿದ್ದರು. ಟ್ರೋಲ್ ಪೇಜ್ಗಳು ಇದೇ ಅರ್ಥ ಬರುವ ರೀತಿಯಲ್ಲಿ ಧನಶ್ರೀ ಅವರ ಬಗ್ಗೆ ಪೋಸ್ಟ್ ಗಳನ್ನು ಮಾಡಿದ್ದವು. ಜೊತೆಗೆ ಚಹಲ್ ವಿಚ್ಛೇದನದ ದಿನ ಶರ್ಟ್ ಮೇಲೆ ಧನಶ್ರೀ ಅವರ ಮೇಲೆ ಟೀಕೆಗಳು ಬರುವ ರೀತಿಯ ಸಾಲುಗಳು ಹಾಕಿಕೊಂಡು ಬಂದಿದ್ದರು.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧನಶ್ರೀ, "ನಮ್ಮ ಮಧ್ಯೆ ಏನೋ ಜಗಳ ಆಯಿತು, ಒಬ್ಬರು ಸಂಬಂಧ ಕೊನೆ ಮಾಡಿಕೊಳ್ಳೋಣ ಎಂದು ಹೇಳಿದರು ಎಂದಿಟ್ಟುಕೊಳ್ಳಿ. ಆ ಮಾತಿಗೆ ಬದ್ಧವಾಗಿರಬೇಕು. ಪ್ರತಿಯೊಬ್ಬರ ಕೈಯಲ್ಲಿ ತಮ್ಮದೇ ಆದ ಗೌರವವಿರುತ್ತದೆ. ನೀವು ಮದುವೆ ಆದ ಬಳಿಕ ಇನ್ನೊಬ್ಬ ವ್ಯಕ್ತಿಯ ಗೌರವವೂ ನಿಮ್ಮ ಕೈಯಲ್ಲಿರುತ್ತದೆ" ಎಂದು ತಿಳಿಸಿದ್ದಾರೆ.
"ನನಗೂ ಅಗೌರವ ಸೂಚಿಸಲು, ಅವಮಾನ ಮಾಡಲು ಬರುತ್ತಿತ್ತು. ಆದರೆ, ಅವರು ನನ್ನ ಪತಿ ಆಗಿದ್ದರು. ನಾನು ಮದುವೆ ಆದ ಬಳಿಕ ಅವರಿಗೆ ಗೌರವ ನೀಡಿದ್ದೆ. ಈಗಲೂ ನಾನು ಮದುವೆಯಾದ ವ್ಯಕ್ತಿಯನ್ನು ಗೌರವಿಸಬೇಕು" ಎಂದು ಹೇಳಿದ್ದಾರೆ.