ಬೆಂಗಳೂರು, ಸೆ. 17 (DaijiworldNews/AA): ಹಿರಿಯ ನಟಿ, ಪಂಚಭಾಷಾ ತಾರೆ ದಿ. ಬಿ.ಸರೋಜಾದೇವಿ ಅವರ ಹೆಸರಿನಲ್ಲಿ 'ಅಭಿನಯ ಸರಸ್ವತಿ' ಪ್ರಶಸ್ತಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಕನ್ನಡ ಚಲನಚಿತ್ರ ನಟಿ, ಪಂಚಭಾಷಾ ತಾರೆ, ಪದ್ಮಶ್ರೀ ಹಾಗೂ ಪದ್ಮಭೂಷಣ ವಿಜೇತೆ ದಿವಂಗತ ಬಿ.ಸರೋಜಾದೇವಿ ಅವರು ಭಾರತೀಯ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಕೊಡುಗೆಯನ್ನು ಪರಿಗಣಿಸಿ ಅವರು ಪಡೆದಿದ್ದ 'ಅಭಿನಯ ಸರಸ್ಕೃತಿ' ಬಿರುದಿನ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು.
ಪ್ರಸ್ತುತ ಜಾರಿಯಲ್ಲಿರುವ ಕನ್ನಡ ಚಲನಚಿತ್ರ ನೀತಿ-2011ರಲ್ಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಅನುಬಂಧ-೧ರಡಿ ಜಾರಿಗೆ ತರಲಾಗಿದೆ. ಈ ಪ್ರಶಸ್ತಿಯಡಿಯಲ್ಲಿ 1 ಲಕ್ಷ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.