ಉತ್ತರ ಪ್ರದೇಶ, ಸೆ. 19 (DaijiworldNews/AA): ನಟಿ ದಿಶಾ ಪಟಾನಿ ಮನೆ ಹೊರಗೆ ನಡೆಸಿದ ಗುಂಡಿನ ದಾಳಿ ಪ್ರಕರಣ ಸಂಬಂಧಿಸಿದಂತೆ ಇದೀಗ ದೆಹಲಿ ಪೊಲೀಸರು ಮತ್ತಿಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ.

ದಿಶಾ ಪಟಾನಿ ಮನೆ ಹೊರಗೆ ಗುಂಡಿನ ದಾಳಿ ನಡೆದ ಒಂದು ದಿನ ಮೊದಲು ಅಂದರೆ ಸೆ.11 ರಂದು ನಸುಕಿನ 4 ಗಂಟೆ ಸುಮಾರಿಗೆ ಇಬ್ಬರು ಅಪ್ರಾಪ್ತರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಉತ್ತರ ಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆ ಹೊರಗೆ ಸೆ.12ರಂದು ನಸುಕಿನ 3.30ರ ಸುಮಾರಿಗೆ, ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಿಶಾ ಪಟಾನಿ ಅವರ ಮನೆಯ ಮೇಲೆ ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಗುಂಡಿನ ದಾಳಿ ನಡೆದ ಮನೆಯಲ್ಲಿ ದಿಶಾ ಪಟಾನಿ ಕುಟುಂಬ ವಾಸವಿತ್ತು. ಬಳಿಕ ಈ ಗುಂಡಿನ ದಾಳಿಯ ಹೊಣೆಯನ್ನು ಗೋಲ್ಡಿ ಬ್ರಾರ್ ಗ್ಯಾಂಗ್ ಹೊತ್ತುಕೊಂಡಿತ್ತು.
ದುಷ್ಕರ್ಮಿಗಳ ಬೆನ್ನತ್ತಿ ಪೊಲೀಸರ ಮೇಲೆಯೇ ಶಂಕಿತರು ಗುಂಡಿನ ದಾಳಿಗೆ ಮುಂದಾಗಿದ್ದರು. ಬಳಿಕ ಪೊಲೀಸರು ಪ್ರತಿದಾಳಿ ನಡೆಸಿದರು. ಈ ವೇಳೆ ಗಾಯಗೊಂಡಿದ್ದ ಶಂಕಿತರು ಬಳಿಕ ಸಾವನ್ನಪ್ಪಿದರು.
ಪೋಸ್ಟ್ ನಲ್ಲಿ ಏನಿದೆ?
ದಾಳಿ ಹೊಣೆ ಹೊತ್ತಿದ್ದ ಗೋಲ್ಡಿ ಬ್ರಾರ್ ಗ್ಯಾಂಗ್ ಅದಕ್ಕೆ ಕಾರಣ ಉಲ್ಲೇಖಿಸಿ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಎಲ್ಲಾ ಸಹೋದರರಿಗೆ ರಾಮ್ ರಾಮ್... ನಾನು, ವೀರೇಂದ್ರ ಚರಣ್, ಮಹೇಂದ್ರ ಶರಣ್ (ದೆಲಾನಾ). ಸಹೋದರರೇ, ಇಂದು ಖುಷ್ಬೂ ಪಟಾನಿ/ದಿಶಾ ಪಟಾನಿ (ಬಾಲಿವುಡ್ ನಟಿ) ಮನೆಯಲ್ಲಿ (ವಿಲ್ಲಾ ನಂ. 40, ಸಿವಿಲ್ ಲೈನ್ಸ್, ಬರೇಲಿ, ಯುಪಿ) ನಡೆದ ಗುಂಡಿನ ದಾಳಿಯನ್ನು ನಾವು ಮುಗಿಸಿದ್ದೇವೆ. ಅವರು ನಮ್ಮ ಪೂಜ್ಯ ಸಂತರನ್ನು (ಪ್ರೇಮಾನಂದ ಜಿ ಮಹಾರಾಜ್ ಮತ್ತು ಅನಿರುದ್ಧಾಚಾರ್ಯ ಜಿ ಮಹಾರಾಜ್) ಅವಮಾನಿಸಿದ್ದಾರೆ. ಅಲ್ಲದೇ ನಮ್ಮ ಸನಾತನ ಧರ್ಮವನ್ನು ಅವಮಾನಿಸಲು ಪ್ರಯತ್ನಿಸಿದರು. ನಮ್ಮ ದೇವತೆಗಳ ಮೇಲಿನ ಅವಮಾನ ಸಹಿಸಲಾಗದು. ಇದು ಕೇವಲ ಟ್ರೈಲರ್ ಅಷ್ಟೇ. ಮುಂದಿನ ಬಾರಿ, ಅವರು ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿಸಿದ್ರೆ, ಅವರ ಮನೆಯಲ್ಲಿ ಯಾರೂ ಜೀವಂತವಾಗಿ ಉಳಿಯುವುದಿಲ್ಲ" ಎಂದು ಎಚ್ಚರಿಕೆ ನೀಡಿತ್ತು.