ಮುಂಬೈ, ಸೆ. 21 (DaijiworldNews/AA): ಚಿತ್ರಮಂದಿರದ ಒಳಗೆ ಸಿನಿಮಾ ಪ್ರದರ್ಶನ ಆಗುತ್ತಿರುವ ಸಮಯದಲ್ಲಿ ತಿಂಡಿ-ತಿನಿಸು ಮಾರಾಟ ಮಾಡುವುದು, ಅಥವಾ ಸೇವೆ ನೀಡುವುದು ಸರಿಯಲ್ಲ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ.

ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೂ, ಸಿನಿಮಾ ನೋಡುತ್ತಿರುವ ಪ್ರೇಕ್ಷಕರ ಬಳಿ ಬಂದು ಆರ್ಡರ್ ಪಡೆಯುವುದು, ತಿಂಡಿ-ತಿನಿಸುಗಳನ್ನು ಮಾರಲು ಪ್ರಯತ್ನಿಸುವುದು, ಆರ್ಡರ್ ನೀಡಿದ ಪ್ರೇಕ್ಷಕನಿಗೆ ಸರ್ವೀಸ್ ನೀಡುವುದು ಚಿತ್ರಮಂದಿರಗಳಲ್ಲಿ ಸಾಮಾನ್ಯವಾಗಿದೆ. ಇದೀಗ ಈ ಬಗ್ಗೆ ಅಮೀರ್ ಖಾನ್ ವಿರೋಧ ವ್ಯಕ್ತಪಡಿಸಿದ್ದಾರೆ.
"ಈ ಬಗ್ಗೆ ನಾನು ಮಲ್ಟಿಪ್ಲೆಕ್ಸ್ಗಳವರಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಸಿನಿಮಾ ಶುರುವಾಗುವ ಮುಂಚೆಯೇ ತಿಂಡಿ-ತಿನಿಸು ತೆಗೆದುಕೊಳ್ಳಬೇಕು ಅಥವಾ ಇಂಟರ್ವೆಲ್ ಸಮಯದಲ್ಲಿ ತೆಗೆದುಕೊಳ್ಳಬೇಕು. ಸಿನಿಮಾ ಪ್ರದರ್ಶನ ಆಗುತ್ತಿರುವ ವೇಳೆ ತಿಂಡಿ-ತಿನಿಸು ಮಾರುವುದು ಸರಿಯಲ್ಲ, ಅದು ಸಿನಿಮಾ ವೀಕ್ಷಣೆಯ ಅನುಭವವನ್ನು ಹಾಳು ಮಾಡುತ್ತದೆ" ಎಂದು ಅವರು ತಿಳಿಸಿದ್ದಾರೆ.
"ಮುಂಚೆ ಸಿನಿಮಾ ವೀಕ್ಷಕರಿಗೆ ಹೆಚ್ಚು ಏಕಾಗ್ರತೆ ಇತ್ತು, ಅವರು ಗಮನವಿಟ್ಟು ಸಿನಿಮಾ ವೀಕ್ಷಿಸುತ್ತಿದ್ದರು, ಒಂದೊಮ್ಮೆ ಸಿನಿಮಾ ಅವರಿಗೆ ಇಷ್ಟ ಆಗಲಿಲ್ಲವೆಂದರೆ ಮಧ್ಯದಲ್ಲಿಯೇ ಎದ್ದು ಹೋಗಿಬಿಡುತ್ತಿದ್ದರು. ಆದರೆ ಈಗಿನ ಪ್ರೇಕ್ಷಕರಿಗೆ ಏಕಾಗ್ರತೆ ಇಲ್ಲ, ಸಿನಿಮಾ ನೋಡುವಾಗ ಮೊಬೈಲ್ ನೋಡುತ್ತಾರೆ, ಮೆಸೇಜ್ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸುತ್ತಾರೆ. ಸಿನಿಮಾದ ಮೇಲೆ ಅವರಿಗೆ ಏಕಾಗ್ರತೆಯೇ ಇರುವುದಿಲ್ಲ" ಎಂದಿದ್ದಾರೆ.