ಬೆಂಗಳೂರು, ಸೆ. 22 (DaijiworldNews/TA): 2022ರ ಸೆಪ್ಟೆಂಬರ್ 30ರಂದು ಬಿಡುಗಡೆಯಾದ ‘ಕಾಂತಾರ’ ಚಿತ್ರದ ಯಶಸ್ಸಿನ ನಂತರ, ದಸರಾ ಹಬ್ಬದ ಪ್ರಯುಕ್ತ ಹೊಸ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ಬಿಡುಗಡೆಗಡ ಸಜ್ಜಾಗಿದೆ. ಈ ಸಿನಿಮಾಗೆ ಸಂಬಂಧಿಸಿದ ಪೋಸ್ಟರ್ಗಳು ಮತ್ತು ಮೇಕಿಂಗ್ ವಿಡಿಯೋಗಳು ಇದುವರೆಗೆ ಬಿಡುಗಡೆಗೊಂಡಿದ್ದರೂ, ಇದೀಗ ಮೊದಲ ಬಾರಿಗೆ ಟ್ರೇಲರ್ ಬಿಡುಗಡೆಗೊಂಡಿದ್ದು, ಅದ್ಭುತ ದೃಶ್ಯ ವೈಭವ ಮತ್ತು ಸ್ತಂಬಿತಗೊಳಿಸುವ ಸ್ಟಂಟ್ಗಳು ಜನಮಾನಸವನ್ನು ಸೆಳೆಯುತ್ತಿವೆ.

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರದ ಹಿಂದಿನ ಕಥಾವಸ್ತುವನ್ನು ಮುಂದುವರೆಸುವ ಈ ಪ್ರೀಕ್ವೆಲ್ ಚಿತ್ರದ ನಿರ್ಮಾಣ ಹೊಂಬಾಳೆ ಫಿಲ್ಮ್ಸ್ ಕೈಯಿಂದ ನಡೆಯುತ್ತಿದೆ. ರಿಷಬ್ ಅವರು ತಾವು ಸೃಷ್ಟಿಸಿದ ಕಥೆಯನ್ನು ತನ್ನದೇ ಆದ ಶೈಲಿಯಲ್ಲಿ ಪ್ರೇಕ್ಷಕರಿಗೆ ತಲುಪಿಸಲು ಸಿದ್ಧರಾಗಿದ್ದಾರೆ. ಚಿತ್ರದ ಶೂಟಿಂಗ್ ಅನೇಕ ಮನಮೋಹಕ ಲೊಕೇಶನ್ಗಳಲ್ಲಿ ನಡೆದಿದ್ದು ಅದ್ದೂರಿ ಸೆಟ್ಗಳನ್ನು ನಿರ್ಮಿಸಲಾಗಿದ್ದು, ಟ್ರೇಲರ್ನಲ್ಲಿ ಈ ಎಲ್ಲದೂ ಸ್ಪಷ್ಟವಾಗಿ ಗೋಚರಿಸುತ್ತಿದೆ.
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಈ ಚಿತ್ರದಲ್ಲಿ ಪ್ರಕಾಶ್ ತುಮಿನಾಡ್, ಪ್ರಮೋದ್ ಶೆಟ್ಟಿ ಮತ್ತು ಗುಲ್ಶನ್ ದೇವಯ್ಯ ರಾಜ್ ಸೇರಿದಂತೆ ಹಲವು ಪ್ರತಿಭಾವಂತರ ಅಭಿನಯವಿದೆ.
ಚಿತ್ರದ ಕಥಾವಸ್ತುವಿನಲ್ಲಿ, ದೈವದ ವೇಶಧಾರಿ ಆಗಿರುವ ರಿಷಬ್ ಶೆಟ್ಟಿ ಮಾಯಾಜಾಲದಂತೆ ಕಾಡಿನಲ್ಲಿ ಇರುವ ವಿಶೇಷ ಸ್ಥಳದ ಇತಿಹಾಸ ಮತ್ತು ರಾಜ ಕುಟುಂಬದ ರಕ್ತಪಾತದ ಕಥೆಯನ್ನು ಅನಾವರಣ ಮಾಡುತ್ತಾರೆ. ಜನ ಸಾಮಾನ್ಯರಿಗೂ ರಾಜ ವಂಶದವರಿಗೂ ಮಧ್ಯೆ ಮೂಡುವ ನಿಜವಾದ ಭಕ್ತಿ, ಪ್ರೀತಿ ಮತ್ತು ಸಂಘರ್ಷಗಳೂ ಚಿತ್ರದಲ್ಲಿವೆ. ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕೆ ಹೃದಯಸ್ಪರ್ಶಿಯಾಗಿ ಬಲ ನೀಡಿದ್ದು, ಅಕ್ಟೋಬರ್ 1 ರಂದು ಪ್ರೀಮಿಯರ್ ಶೋ ಕೂಡ ಆಯೋಜನೆ ಮಾಡಬಹುದಾಗಿದೆ ಎನ್ನಲಾಗಿದೆ.