ಕೊಚ್ಚಿ, ಸೆ. 23 (DaijiworldNews/AA): ಮಲಯಾಳಂ ಸ್ಟಾರ್ ನಟರಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮನೆಗಳ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿರುವ ಕಾರುಗಳು, ಇತರೆ ವಿದೇಶಿ ವಸ್ತುಗಳ ತನಿಖೆ ನಡೆಸಿದ್ದಾರೆ.

ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ವಿರುದ್ಧ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ್ದಾರೆ. ಈ ಇಬ್ಬರು ನಟರಿಗೂ ಬಹಳ ಕಾರ್ ಕ್ರೇಜ್ ಹೊಂದಿರುವ ನಟರು. ತಮ್ಮ ಸಂಗ್ರಹದಲ್ಲಿ ಹಲವಾರು ಐಶಾರಾಮಿ ವಿದೇಶಿ ಬ್ರ್ಯಾಂಡ್ನ ಕಾರುಗಳನ್ನು ಹೊಂದಿದ್ದಾರೆ. ಕೆಲ ಲಿಮಿಟೆಡ್ ಎಡಿಷನ್ ಕಾರುಗಳನ್ನು ಈ ನಟರುಗಳು ವಿದೇಶಗಳಿಂದಲೂ ತರಿಸಿಕೊಂಡಿದ್ದಾರೆ. ಹಾಗಾಗಿ ಇದೀಗ ಕಸ್ಟಮ್ಸ್ ಅಧಿಕಾರಿಗಳು ಆ ಕಾರುಗಳ ದಾಖಲೆಗಳನ್ನು ಪರಿಶೀಲಿಸಿದ್ದು, ತೆರಿಗೆ, ನೊಂದಣಿ ಇತ್ಯಾದಿ ಮಾಹಿತಿಯನ್ನು ಪಡೆದಿದ್ದಾರೆ.
ಕೇರಳದ ಕೊಚ್ಚಿಯ ತೇವರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಮನೆ ಹಾಗೂ ಕೊಚ್ಚಿಯ ಪನಂಪಿನ್ನಿ ನಗರದಲ್ಲಿರುವ ದುಲ್ಕರ್ ಸಲ್ಮಾನ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಪೃಥ್ವಿರಾಜ್ ಅವರ ತಿರುವನಂತಪುರಂನ ಮನೆ ಮೇಲೂ ದಾಳಿ ಮಾಡಿದ್ದಾರೆ. ಆದರೆ ಅಲ್ಲಿ ಯಾವುದೇ ವಿದೇಶಿ ವಾಹನ ಪತ್ತೆಯಾಗಿಲ್ಲವಂತೆ. ನಟರುಗಳು ಮಾತ್ರವೇ ಅಲ್ಲದೆ ಕೆಲವು ಉದ್ಯಮಿಗಳ ಮನೆಗಳ ಮೇಲೂ ಸಹ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.