ಹೈದರಬಾದ್, ಸೆ. 29 (DaijiworldNews/AK): ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ದೇಶಾದ್ಯಂತ 6 ಸಾವಿರಕ್ಕೂ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಕಾಣಲಿದೆ.

ಈ ಸಿನಿಮಾದ ಬಜೆಟ್ 150 ಕೋಟಿ ರೂಪಾಯಿ ಮೀರಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ರಿಷಬ್ ಶೆಟ್ಟಿ ಹಾಗೂ ತಂಡ ಹೈದರಾಬಾದ್ಗೆ ತೆರಳಿ ಸಿನಿಮಾ ಪ್ರಚಾರ ಮಾಡಿದೆ. ಈ ವೇಳೆ ವೇದಿಕೆ ಮೇಲೆ ರಿಷಬ್ ಅವರು ಕನ್ನಡದಲ್ಲೇ ಮಾತನಾಡಿದರು ಅನ್ನೋದು ವಿಶೇಷ.
ಸಾಮಾನ್ಯವಾಗಿ ಬೇರೆ ರಾಜ್ಯದಲ್ಲಿ ಸಿನಿಮಾ ಪ್ರಚಾರಕ್ಕೆ ವೇದಿಕೆ ಏರಿದಾಗ ಕಲಾವಿದರು ಅಲ್ಲಿನ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ. ಇಲ್ಲವೇ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಭಾಷಣ ಇರುತ್ತದೆ. ಆದರೆ, ರಿಷಬ್ ಶೆಟ್ಟಿ ಅವರು ಹೈದರಾಬಾದ್ನಲ್ಲಿ ನಡೆದ ‘ಕಾಂತಾರ: ಚಾಪ್ಟರ್ 1’ ಪ್ರೀ-ರಿಲೀಸ್ ಈವೇಂಟ್ ಅಲ್ಲಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ.
‘ಮನಸ್ಸಿನಿಂದ ಮಾತನಾಡಬೇಕು, ಹೀಗಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಅರ್ಥ ಆಗಿಲ್ಲ ಎಂದರೆ ಸಹೋದರ (ಜೂನಿಯರ್ ಎನ್ಟಿಆರ್) ಟ್ರಾನ್ಸ್ಲೇಷನ್ ಮಾಡುತ್ತಾರೆ. ಅವರನ್ನು ಫ್ರೆಂಡ್ ಎನ್ನಬೇಕಾ, ಸಹೋದರ ಎನ್ನಬೇಕಾ ಎಂಬುದೇ ಗೊತ್ತಾಗೋದಿಲ್ಲ. ಅವರು ನನ್ನೂರವರಂತೆ ಭಾಸವಾಗುತ್ತದೆ ಎಂದ ರಿಷಬ್. ಹೈದರಾಬಾದ್ಗೆ ಬರ್ತೀನಿ ಎಂದಾಗ ನನ್ನ ಆಡಿಯನ್ಸ್ಗೆ ನಿಮ್ಮನ್ನು ಪರಿಚಯಿಸ್ತೀನಿ ಎಂದು ಅವರೇ ಕರೆದುಕೊಂಡು ಬಂದು ನಿಲ್ಲಿಸಿದರು ಎಂದು ರಿಷಬ್ ಹೇಳಿದರು.