ಮುಂಬೈ, ಅ. 02 (DaijiworldNews/TA): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಇನ್ನೂ ಗಂಭೀರ ಆರ್ಥಿಕ ಅಪರಾಧ ಪ್ರಕರಣಗಳು ಬಾಕಿ ಇವೆ ಎಂಬುದನ್ನು ಉಲ್ಲೇಖಿಸಿ, ಬಾಂಬೆ ಹೈಕೋರ್ಟ್ ಅವರು ಕೋರಿದ್ದ ಥೈಲ್ಯಾಂಡ್ನ ಫುಕೆಟ್ಗೆ ಮೂರು ದಿನಗಳ ಪ್ರವಾಸ ಪ್ರಯಾಣಕ್ಕೆ ಅನುಮತಿ ನೀಡಲು ನಿರಾಕರಿಸಿದೆ.

ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ಇವರ ವಿರುದ್ಧ ಈಗಾಗಲೇ ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದು, ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನ್ಯಾಯಾಲಯವನ್ನು ಮನವಿ ಮಾಡಲಾಗಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿರುವ ಪೀಠ, ಈ ಮನವಿಯನ್ನು ನಿರಾಕರಿಸಿತು.
ದಂಪತಿಗಳ ಪರವಾಗಿ ವಕೀಲರು, ರಾಜ್ ಕುಂದ್ರಾ ತನಿಖಾ ಸಂಸ್ಥೆಗಳಿಗೆ ಸದಾ ಸಹಕಾರ ನೀಡುತ್ತಿರುವುದಾಗಿ ಮತ್ತು ಈ ಸಂದರ್ಭವೂ ಸಹ ನೀಡುತ್ತಾರೆಂಬ ಭರವಸೆ ನೀಡಿದರು. ಅವರು ತಮ್ಮ ವೃತ್ತಿಪರ ಬದ್ಧತೆಗಳು ಮತ್ತು ವ್ಯವಹಾರಗಳ ನಿಮಿತ್ತ ವಿದೇಶ ಪ್ರವಾಸ ಮಾಡಬೇಕಾಗುತ್ತದೆ ಎಂದು ವಾದಿಸಿದರು. ಶಿಲ್ಪಾ ಶೆಟ್ಟಿಯು ತನ್ನ ವೃತ್ತಿಪರ ಕಾರಣಗಳಿಂದಾಗಿ ಹೊರ ದೇಶಗಳಿಗೆ ಪ್ರಯಾಣಿಸಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಆದಾಗ್ಯೂ, ಸರ್ಕಾರಿ ವಕೀಲರು, ಆರೋಪಗಳು ಗಂಭೀರವಾಗಿದ್ದು, ತನಿಖೆ ಇನ್ನೂ ಮುಗಿಯದಿರುವ ಹಿನ್ನೆಲೆಯಲ್ಲಿ ಇವರಿಗೆ ಯಾವುದೇ ತಾತ್ಕಾಲಿಕ ಪರಿಹಾರ ನೀಡುವುದು ಸರಿಯಲ್ಲ ಎಂದು ನುಡಿದರು. ನ್ಯಾಯಾಲಯವು ಕೂಡ ಇದನ್ನೇ ಗಮನಿಸಿ, "ಅರ್ಜಿದಾರರು ವೃತ್ತಿ ಮುಂದುವರಿಸಲು ಹಕ್ಕು ಹೊಂದಿದರೂ, ಪ್ರಕರಣದ ಗಂಭೀರತೆಯನ್ನು ನಿರ್ಲಕ್ಷ್ಯ ಮಾಡಲಾಗದು" ಎಂದು ತೀರ್ಪು ನೀಡಿದೆ.
ಇದರಿಂದಾಗಿ, ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರ ವಿದೇಶ ಪ್ರವಾಸಕ್ಕೆ ತಾತ್ಕಾಲಿಕ ತಡೆ ಸಿಕ್ಕಿದೆ. ಈ ನಡುವೆ, ದಂಪತಿಗಳು 60 ಕೋಟಿ ರೂಪಾಯಿ ಹೂಡಿಕೆಯಲ್ಲಿ ಉದ್ಯಮಿ ದೀಪಕ್ ಕೊಠಾರಿಗೆ ಮೋಸಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಆ ಹಣವನ್ನು ಕಂಪನಿಯ ಹೂಡಿಕೆಗೆ ಬಳಸುವುದಾಗಿ ಹೇಳಿ, ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ದೂರಲಾಗಿದೆ.