ಬೆಂಗಳೂರು, ಅ. 03 (DaijiworldNews/AA): ರಿಷಬ್ ಶೆಟ್ಟಿ ನಟನೆಯ 'ಕಾಂತಾರ: ಚಾಪ್ಟರ್ 1' ಸಿನಿಮಾ ಭಾರತದಲ್ಲಿ ಕನ್ನಡ, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಡೆಯಾಗಿದೆ. ಈ ಸಿನಿಮಾ ಮೊದಲ ದಿನ ಬರೋಬ್ಬರಿ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಪ್ರೇಕ್ಷಕರ ಉತ್ತಮ ಸ್ಪಂದನೆಗೆ ರಿಷಬ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯುತ್ತಿದೆ. ಈ ಬಗ್ಗೆ ಎಕ್ಸ್ನಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ರಿಷಬ್ ಶೆಟ್ಟಿ, "2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು ಹೌಸ್ ಫುಲ್ ಶೋಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ" ಎಂದು ತಿಳಿಸಿದ್ದಾರೆ.
2016ರಲ್ಲಿ ಸಿನಿಮಾ ಪ್ರದರ್ಶನಕ್ಕಾಗಿ ಒದ್ದಾಡಿದ ಸಂದರ್ಭದ ಪೋಸ್ಟ್ ಅನ್ನು ಕೂಡ ರಿಷಬ್ ಶೆಟ್ಟಿ ರೀ-ಪೋಸ್ಟ್ ಮಾಡಿದ್ದಾರೆ. ಇನ್ನು ರಿಷಬ್ ಶೆಟ್ಟಿ ಅವರ ಈ ಟ್ವೀಟ್ ಎಲ್ಲೆಡೆ ವೈರಲ್ ಆಗುತ್ತಿದೆ.