ಹೈದರಾಬಾದ್, ಡಿ. 11 (DaijiworldNews/AA): ಗಾಯಕಿ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಚಿನ್ಮಿಯಿ ಶ್ರೀಪಾದ್ ಅವರ ಬೆತ್ತಲೆಯ ಫೇಕ್ ಫೋಟೋವನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಈ ಬಗ್ಗೆ ಹೈದರಾಬಾದ್ ನಗರ ಪೊಲೀಸ್ ಕಮಿಷನರ್ಗೆ ಚಿನ್ಮಯಿ ಅವರು ದೂರು ನೀಡಿದ್ದಾರೆ.

ಕೆಲವು ವಾರಗಳ ಹಿಂದೆ ಅವರ ಪತಿ, ನಿರ್ಮಾಪಕ-ನಟ ರಾಹುಲ್ ರವೀಂದ್ರನ್ ಅವರು 'ಮಂಗಳಸೂತ್ರ ಧರಿಸೋದು ಬಿಡೋದು ಪತ್ನಿಗೆ ಬಿಟ್ಟ ಸ್ವಾತಂತ್ರ್ಯ' ಎಂದು ಹೇಳಿದ್ದರು. ಅಂದಿನಿಂದ, ತಮ್ಮ ಮತ್ತು ಅವರ ಕುಟುಂಬದ ವಿರುದ್ಧದ ಟ್ರೋಲ್ ಹೆಚ್ಚಾಗಿದೆ ಎಂದು ಚಿನ್ಮಯಿ ವಿವರಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, "ನಾನು ಫೇಕ್ ಫೋಟೋ ವಿಷಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಕಾನೂನು ಕ್ರಮ ಕೈಗೊಳ್ಳುತ್ತದೆಯೇ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ. ಕಳೆದ 8-10 ವಾರಗಳಿಂದ ನಮ್ಮ ಕುಟುಂಬಕ್ಕೆ ಕಿರುಕುಳ ನೀಡಲು ಕೆಲವರಿಗೆ ಹಣ ನೀಡಲಾಗಿದೆ" ಎಂದು ಹೇಳಿದ್ದಾರೆ.
"ನನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ. ನನ್ನ ಮಕ್ಕಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ತಮಗೆ ಇಷ್ಟವಿಲ್ಲದ ಮಹಿಳೆಯರು ಎಂದಿಗೂ ಮಕ್ಕಳನ್ನು ಹೊಂದಬಾರದು. ಒಂದೊಮ್ಮೆ ಈಗಾಗಲೇ ಅವರಿಗೆ ಮಕ್ಕಳು ಹುಟ್ಟಿದ್ದರೆ ಅವರು ಸಾಯಬೇಕು ಎಂದು ಕೆಲವರು ಹೇಳಿದ್ದಾರೆ. ಇದು ಕೆಲವರಿಗೆ ನಗು ತರಿಸಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಗೀತರಚನೆಕಾರರೊಬ್ಬರ ಕಿರುಕುಳದ ಬಗ್ಗೆ ಮಾತನಾಡಿದಾಗಿನಿಂದ ತನ್ನನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ಬಹಳಷ್ಟು ಜನರು ನನ್ನನ್ನು ನಿಂದಿಸಿದ್ದಾರೆ. ಅವರಿಗೆ ರಾಜಕೀಯ ಗುಂಪುಗಳು ಹಣ ನೀಡಿವೆ. ಇಂದು ಒಂದು ನಿರ್ದಿಷ್ಟ ಟ್ವೀಟ್ನಲ್ಲಿ ನನ್ನ ನಗ್ನ ಮಾರ್ಫ್ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ರೀತಿಯ ವಿಷಯಗಳು ನಡೆಯುತ್ತವೆ ಎಂದು ಮಹಿಳೆಯರಿಗೆ ತಿಳಿದಿರಲಿ ಎಂದು ನಾನು ಈ ವಿಷಯ ಹೇಳುತ್ತಿದ್ದೇನೆ. ಪುರುಷರು ನಮ್ಮನ್ನು ಸಾರ್ವಜನಿಕ ಸ್ಥಳಗಳಿಂದ ಹೊರಗೆ ತಳ್ಳಲು ಇದನ್ನು ಮಾಡುತ್ತಾರೆ" ಎಂದರು.
"ಭವಿಷ್ಯದಲ್ಲಿ ಈ ರೀತಿಯ ತೊಂದರೆಗಳು ತುಂಬಾ ಸಾಮಾನ್ಯವಾಗಲಿದೆ, ಅಲ್ಲಿ ಪುರುಷರು ಯಾವಾಗಲೂ ತಂತ್ರಜ್ಞಾನ, ಶಕ್ತಿಯನ್ನು ಬಳಸಿಕೊಂಡು ತಮಗೆ ಇಷ್ಟವಿಲ್ಲದ ಮಹಿಳೆಯರನ್ನು ಕೆಣಕುತ್ತಾರೆ. ಈ ಮೊದಲು ಪುರಷರು, ಮಹಿಳೆಯರನ್ನು ಮಾಟಗಾತಿಯರು, ಮತ್ತು ವೇಶ್ಯೆಯರು ಎಂದು ಕರೆಯುತ್ತಿದ್ದರು. ಮಹಿಳೆಯನ್ನು ಬಯಸಿ ಅವಳು ಸಿಗದಿದ್ದರೆ, ಅವರು ಅವಳ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಾರೆ. ಇದರಿಂದ ಅವಳ ಜೀವನವು ದುಃಖಕರವಾಗಿರುತ್ತದೆ. ಇದು ಯಾವಾಗಲೂ ಸಮಾಜದಲ್ಲಿ ನಡೆದೇ ಇದೆ" ಎಂದು ತಿಳಿಸಿದ್ದಾರೆ.