ಉಡುಪಿ, ಜ. 11 (DaijiworldNews/TA): ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಈ ನಡುವೆ ಅವರು ಊರಿನ ಸಂಪ್ರದಾಯಕ್ಕೆ ಒತ್ತು ನೀಡುತ್ತಾ, ಉಡುಪಿ ಜಿಲ್ಲೆಯ ಅಲೆವೂರು ಗ್ರಾಮದಲ್ಲಿ ನಡೆದ ನೇಮೋತ್ಸವದಲ್ಲಿ ಭಾಗವಹಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಉಡುಪಿ ತಾಲೂಕಿನ ಅಲೆವೂರಿನ ಕಲ್ಯಾಣ ನಗರದಲ್ಲಿ ಅಲೆವೂರು ದೊಡ್ಡಮನೆ ಕುಟುಂಬದವರು ನಿರ್ವಹಿಸುವ ಸಾಂಪ್ರದಾಯಿಕ ನೇಮೋತ್ಸವ ಭಕ್ತಿಭಾವದಿಂದ ನಡೆಯಿತು. ಇದೇ ಕುಟುಂಬದ ಕುಡಿಯಾಗಿರುವ ನಟ ರಕ್ಷಿತ್ ಶೆಟ್ಟಿ ಅವರು ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ನೇಮೋತ್ಸವದ ಸಂದರ್ಭದಲ್ಲಿ ಸರಳ ಉಡುಪಿನಲ್ಲಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ ಅವರು, ಬಹಳ ಹೊತ್ತು ದೈವದ ಎದುರು ಕುಳಿತು ಪೂಜಾ ವಿಧಿವಿಧಾನಗಳನ್ನು ವೀಕ್ಷಿಸಿದರು. ಬಳಿಕ ಶಾಂತವಾಗಿ ಸ್ಥಳದಿಂದ ತೆರಳಿದರು. ಊರಿನ ಸಂಪ್ರದಾಯವನ್ನು ಗೌರವಿಸಿದ ಅವರ ನಡೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ರಕ್ಷಿತ್ ಶೆಟ್ಟಿ ಅವರು ಸದ್ಯ ತಮ್ಮ ಮುಂದಿನ ಚಿತ್ರಗಳ ಸ್ಕ್ರಿಪ್ಟ್ ಕೆಲಸದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಹೊಸ ಕಥೆಗಳು ಹಾಗೂ ವಿಭಿನ್ನ ಪ್ರಯೋಗಗಳೊಂದಿಗೆ ಮತ್ತೆ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲು ಅವರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸ್ಟಾರ್ ಆಗಿದ್ದರೂ ಸಂಪ್ರದಾಯ ಮತ್ತು ಮೂಲ ಸಂಸ್ಕೃತಿಗೆ ಬದ್ಧರಾಗಿರುವ ರಕ್ಷಿತ್ ಶೆಟ್ಟಿ ಅವರ ಈ ನಡೆ ಅಭಿಮಾನಿಗಳ ಮನ ಗೆದ್ದಿದೆ.