ಮುಂಬೈ, ಜ. 18 (DaijiworldNews/AA): ನಾನು ಕೇಸರಿ ಪಕ್ಷಕ್ಕೆ ಬೆಂಬಲ ನೀಡುತ್ತೇನೆ ಎಂಬ ಕಾರಣಕ್ಕೆ ನನಗೆ ಚಿತ್ರರಂಗದಲ್ಲಿ ಪಕ್ಷಪಾತ ಆಗುತ್ತದೆ. ಆದರೂ ಕೂಡ ನಾನು ನಿಮ್ಮಷ್ಟು ಪೂರ್ವಾಗ್ರಹ ಪೀಡಿತ ಹಾಗೂ ದ್ವೇಷಪೂರಿತ ವ್ಯಕ್ತಿಯನ್ನು ನೋಡಿಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ವಿರುದ್ಧ ನಟಿ ಕಂಗನಾ ರಣಾವತ್ ವಾಗ್ದಾಳಿ ನಡೆಸಿದ್ದಾರೆ.

'ಛಾವ' ಚಿತ್ರವು ಜನರ ಒಗ್ಗಟ್ಟನ್ನು ಒಡೆಯುತ್ತದೆ ಎಂದು ಎ.ಆರ್. ರೆಹಮಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಈ ಹೇಳಿಕೆಗೆ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ತಮ್ಮ ಅಭಿಪ್ರಾಯ ತಿಳಿಸಿರುವ ನಟಿ ಕಂಗನಾ ರಣಾವತ್, "ನಾನು ನನ್ನ ನಿರ್ದೇಶನದ ಮೊದಲ ಸಿನಿಮಾ 'ಎಮರ್ಜೆನ್ಸಿ' ಕಥೆಯನ್ನು ನಿಮಗೆ ಹೇಳಬೇಕು ಎಂದುಕೊಂಡಿದ್ದೆ. ಕಥೆ ಕೇಳುವುದು ಬಿಡಿ, ನೀವು ನನ್ನನ್ನು ಭೇಟಿ ಮಾಡಲು ಕೂಡ ನಿರಾಕರಿಸಿದಿರಿ. ಪ್ರೊಪಗಾಂಡ ಸಿನಿಮಾದ ಭಾಗ ಆಗಲು ನಿಮಗೆ ಇಷ್ಟ ಇರಲಿಲ್ಲ ಅಂತ ನನಗೆ ಯಾರೋ ಹೇಳಿದರು. ವಿಪರ್ಯಾಸ ಏನೆಂದರೆ, ಎಲ್ಲ ವಿಮರ್ಶಕರು ಎಮರ್ಜೆನ್ಸಿ ಸಿನಿಮಾವನ್ನು ಮಾಸ್ಟರ್ಪೀಸ್ ಅಂತ ಕರೆದರು" ಎಂದು ಬರೆದುಕೊಂಡಿದ್ದಾರೆ.
"ನಿಷ್ಪಕ್ಷಪಾತವಾಗಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದ ಮುಖಂಡರು ಕೂಡ ಎಮರ್ಜೆನ್ಸಿ ಸಿನಿಮಾವನ್ನು ಹೊಗಳಿದರು. ಆದರೆ ನೀವು ನಿಮ್ಮ ದ್ವೇಷದಿಂದ ಕುರುಡಾಗಿದ್ದೀರಿ. ನಿಮ್ಮನ್ನು ಕಂಡರೆ ನನಗೆ ಅಯ್ಯೋ ಎನಿಸುತ್ತದೆ" ಎಂದು ಕಂಗನಾ ರಣಾವತ್ ಅವರು ಪೋಸ್ಟ್ ಮಾಡಿದ್ದಾರೆ.