ಬೆಂಗಳೂರು, ಜ. 19 (DaijiworldNews/TA): ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆರಂಭದಲ್ಲಿ ಅವರು ಫಿನಾಲೆಗೂ ತಲುಪುತ್ತಾರೆ ಎನ್ನುವುದನ್ನೇ ಯಾರೂ ಊಹಿಸಿರಲಿಲ್ಲ. ಹೆಚ್ಚು ಮತಗಳನ್ನು ಪಡೆದು ರಕ್ಷಿತಾ ರನ್ನರ್ ಅಪ್ ಸ್ಥಾನ ಪಡೆದಿರುವುದು ಅವರ ಪ್ರಯಾಣವನ್ನು ನಿಜಕ್ಕೂ ‘ಮಿರಾಕಲ್ ಜರ್ನಿ’ಯಾಗಿ ಮಾಡಿದೆ.

ಈ ಸೀಸನ್ನ ಮೊದಲ ದಿನವೇ ರಕ್ಷಿತಾ ಶೆಟ್ಟಿ ಮನೆಯವರ ವೋಟಿಂಗ್ ಆಧಾರದ ಮೇಲೆ ಎಲಿಮಿನೇಟ್ ಆಗಿದ್ದರು. ಇದು ವೀಕ್ಷಕರಿಗೆ ಭಾರೀ ಶಾಕ್ ನೀಡಿತ್ತು. ಆದರೆ ಒಂದು ವಾರದ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಅವರು ಮತ್ತೆ ದೊಡ್ಮನೆಗೆ ಮರಳಿದರು. ಅಲ್ಲಿಂದಲೇ ಅವರ ಆಟಕ್ಕೆ ಹೊಸ ತಿರುವು ಸಿಕ್ಕಿತು. ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಗೆಜ್ಜೆ ವಿಚಾರದ ಗಲಾಟೆ ರಕ್ಷಿತಾಗೆ ದೊಡ್ಡ ಮೈಲೇಜ್ ತಂದಿತು. ಅಶ್ವಿನಿ ಅವರ ಟೀಕೆಗಳು ರಕ್ಷಿತಾ ಮೇಲೆ ಜನರ ಗಮನ ಸೆಳೆದವು. ಪ್ರತಿಬಾರಿ ಕೆಳಕ್ಕೆ ಇಳಿಸುವ ಪ್ರಯತ್ನವಾದಾಗಲೂ ರಕ್ಷಿತಾ ಇನ್ನಷ್ಟು ಮೇಲಕ್ಕೆ ಏರುತ್ತಲೇ ಹೋದರು.
ಒಂದು ಹಂತದಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿಗೆ ಆಟದ ಬಗ್ಗೆ ಪಾಠ ಹೇಳಿದರು. ಅದಾದ ಮರುದಿನವೇ ರಕ್ಷಿತಾ ತಮ್ಮ ಆಟವನ್ನು ಸಂಪೂರ್ಣವಾಗಿ ಬದಲಿಸಿಕೊಂಡರು. ಹೊಸ ತಂತ್ರ, ಧೈರ್ಯ ಮತ್ತು ಸ್ಪಷ್ಟ ನಿಲುವಿನೊಂದಿಗೆ ಆಡಿದ ಅವರು ಕಿಚ್ಚನ ಚಪ್ಪಾಳೆಯನ್ನೂ ಪಡೆದುಕೊಂಡರು. ಇದೇ ಕ್ಷಣದಿಂದ ಅವರ ಆಟದ ಗ್ರಾಫ್ ಮೇಲೇರಿತು. ಕೆಲ ವಾರಗಳ ಹಿಂದೆ ರಕ್ಷಿತಾ ಶೆಟ್ಟಿಯನ್ನು ಎಲಿಮಿನೇಟ್ ಮಾಡಿದಂತೆ ತೋರಿಸಿ, ನಂತರ ಅವರನ್ನು ಸೀಕ್ರೆಟ್ ರೂಂನಲ್ಲಿ ಇರಿಸಲಾಯಿತು. ಅಲ್ಲಿ ಇತರ ಸ್ಪರ್ಧಿಗಳ ಆಟವನ್ನು ಗಮನಿಸಿದ ಬಳಿಕ ಮತ್ತೆ ಮನೆಯೊಳಗೆ ಬಂದ ರಕ್ಷಿತಾ, ಇನ್ನಷ್ಟು ಬಲಿಷ್ಠ ಆಟ ಆಡಿದರು.
ಫಿನಾಲೆಯತ್ತ ಸಾಗುವಾಗ ಟಾಪ್ 6ರಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ, ರಘು ಹಾಗೂ ಧನುಷ್ ಇದ್ದರು. ಮೊದಲು ಧನುಷ್ ಎಲಿಮಿನೇಟ್ ಆಗಿ, ನಂತರ ರಘು ಹೊರನಡೆದರು. ಆ ಬಳಿಕ ಕಾವ್ಯಾ ಔಟ್ ಆದರು. ಟಾಪ್ 3ನಲ್ಲಿ ರಕ್ಷಿತಾ, ಅಶ್ವಿನಿ ಹಾಗೂ ಗಿಲ್ಲಿ ನಟ ಸ್ಥಾನ ಪಡೆದರು. ಅಶ್ವಿನಿ ಗೌಡ ವಿರುದ್ಧ ರಕ್ಷಿತಾ ಶೆಟ್ಟಿ ಮಾಡಿದ ‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’ ಎಂಬ ಚಾಲೆಂಜ್ ಕೂಡ ಇಲ್ಲಿ ಸಾಕಾರವಾಯಿತು. ಅಶ್ವಿನಿ ಟಾಪ್ 2ಗೂ ಮುನ್ನ ಎಲಿಮಿನೇಟ್ ಆಗಿದ್ದು, ಈ ಚಾಲೆಂಜ್ನಲ್ಲಿ ರಕ್ಷಿತಾ ಗೆದ್ದಂತಾಯಿತು.
ಅಂತಿಮವಾಗಿ ಟಾಪ್ 2ರಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಗಿಲ್ಲಿ ನಟ ನಿಂತಿದ್ದರು. ವೋಟಿಂಗ್ ಫಲಿತಾಂಶದಲ್ಲಿ ಗಿಲ್ಲಿ ನಟ 40 ಕೋಟಿಗೂ ಅಧಿಕ ಮತಗಳನ್ನು ಪಡೆದು ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಘೋಷಿತರಾದರು. ಕಿಚ್ಚ ಸುದೀಪ್ ಅವರು ಗಿಲ್ಲಿ ನಟನ ಕೈ ಎತ್ತುವ ಮೂಲಕ ಜಯ ಘೋಷಿಸಿದರು. ರಕ್ಷಿತಾ ಶೆಟ್ಟಿಗೆ ಬಿದ್ದ ಮತಗಳ ಸಂಖ್ಯೆಯನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಆದರೆ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ಈ ಸೀಸನ್ನ ಅತ್ಯಂತ ಕಿರಿಯ ಸ್ಪರ್ಧಿಯಾಗಿ ದೊಡ್ಡ ಸಾಧನೆ ಮಾಡಿದ್ದಾರೆ. ಮೊದಲ ದಿನ ಹೊರಹೋಗಿ, ಫಿನಾಲೆವರೆಗೂ ಬಂದು ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಯ ಜರ್ನಿ ಇಂದು ಅನೇಕರಿಗೆ ಪ್ರೇರಣೆಯಾಗಿದೆ.