ಬೆಂಗಳೂರು, ಜ. 21 (DaijiworldNews/AA): ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ ಮಾಡಿ, ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಲಕ್ಷ್ಮಿ ಅವರು ಡಿಸೆಂಬರ್ ತಿಂಗಳಲ್ಲಿ ತಮ್ಮ ಬಗ್ಗೆ ಅಶ್ಲೀಲ ಕಮೆಂಟ್ಗಳನ್ನು ಮಾಡುತ್ತಿರುವ, ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿರುವವರ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಚಾರ್ಜ್ ಶೀಟ್ ಸಲ್ಲಿಕೆಗೆ ಸಜ್ಜಾಗುತ್ತಿದ್ದಾರೆ.
ಈ ಮೊದಲು ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ. ದಾವಣಗೆರೆಯ ಇಂಜಿನಿಯರ್ ನಿತಿನ್, ಚಿಕ್ಕಬಾಣಾವರದ ಆಟೋ ಡ್ರೈವರ್ ಚಂದ್ರು, ಹುಬ್ಬಳ್ಳಿ ಪೆಟ್ರೋಲ್ ಬಂಕ್ ಮ್ಯಾನೇಜರ್ ನಾಗರಾಜ್ ತಳವಾರ್, ಧಾರವಾಡದ ಆಡಿಟರ್ ಪ್ರಶಾಂತ್ ತಳವಾರ್ ಬಂಧಿತರಾಗಿದ್ದರು. ಇವರ ಜೊತೆಗೆ ಇನ್ನೂ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಟೆಕ್ನಿಕಲ್ ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದಾರೆ. ಕೆಲ ಆರೋಪಿಗಳು ಪರಾರಿಯಾಗಿದ್ದರು. ಇದೀಗ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದು, ಸಾಕ್ಷ್ಯಗಳ ಪರಿಶೀಲನೆ ಬಳಿಕ ಎಲ್ಲರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.