ಬೆಂಗಳೂರು, ಜ. 25 (DaijiworldNews/TA): ಕನ್ನಡದ ಜನಪ್ರಿಯ ನಿರೂಪಕಿ ಮತ್ತು ನಟಿ ಅನುಶ್ರೀ ಇಂದು ತಮ್ಮ 38ನೇ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ತಮ್ಮ ಮನೋಹರ ನಿರೂಪಣೆಯಿಂದ ಕನ್ನಡ ಜನರನ್ನು ಮನರಂಜಿಸುತ್ತಾ ಬಂದಿರುವ ಅನುಶ್ರೀ, ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಕಳೆದ ವರ್ಷ ಆಗಸ್ಟ್ 28, 2025ರಂದು ಕೊಡಗು ಮೂಲದ ಉದ್ಯಮಿ ರೋಷನ್ ಅವರನ್ನು ಅನುಶ್ರೀ ಮದುವೆಯಾಗಿದ್ದರು. ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಸರಳವಾಗಿ ನಡೆಯುವ ಈ ಮದುವೆ ಕಾರ್ಯಕ್ರಮವು ಸಮೂಹ ಹಾಗೂ ಆತ್ಮೀಯವಾಗಿ ನೆರವೇರಿತ್ತು. ಮದುವೆಯ ನಂತರ ಮೊದಲ ಹಬ್ಬವನ್ನು ಆಚರಿಸುತ್ತಿರುವ ಜೋಡಿ, ಹಬ್ಬವನ್ನು ವಿದೇಶದಲ್ಲಿ ಆಚರಿಸಿದಂತೆ ತಿಳಿಯುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡು, ಅನುಶ್ರೀಗೆ ಹಾರೈಸಿದ ಶುಭಾಶಯಗಳನ್ನು ರೋಷನ್ ತಿಳಿಸಿದ್ದಾರೆ. “ಪ್ರೀತಿಯ ಅರ್ಥ ತಿಳಿಸಿದ, ನೋವಿನಲ್ಲಿ ಕಣ್ಣೊರೆಸುವ, ನನ್ನ ಸರ್ವಸ್ವವಾಗಿರುವ ನಿನಗೆ ಜನ್ಮದಿನದ ಶುಭಾಶಯಗಳು ಮೈ ಲವ್...” ಎಂದು ರೋಷನ್ ತಮ್ಮ ಪತ್ನಿಗೆ ಶುಭಾಶಯ ಕೋರಿದ್ದಾರೆ.
ಮಂಗಳೂರಿನ ಸುರತ್ಕಲ್ನಲ್ಲಿ ತುಳು ಕುಟುಂಬದಲ್ಲಿ ಜನಿಸಿದ ಅನುಶ್ರೀ, ತಮ್ಮ ಚುರುಕಾದ ನಿರೂಪಣೆಯಿಂದ ಕನ್ನಡ ಕಿರುತೆರೆಯಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಟಿವಿ ಕಾರ್ಯಕ್ರಮ ‘ಟೆಲಿ ಆಂತ್ಯಕ್ಷರಿ’ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, ಇಟಿವಿ ಕನ್ನಡದ ‘ಡಿಮ್ಯಾಂಡಪ್ಪೋ ಡಿಮಾಂಡು’ ಮೂಲಕ ಜನಪ್ರಿಯರಾದರು. ‘ಬಿಗ್ ಬಾಸ್ ಕನ್ನಡ’ ದಲ್ಲಿ 76 ದಿನಗಳ ಕಾಲ ಭಾಗವಹಿಸಿದ ಅನುಶ್ರೀ, ಸುವರ್ಣ ಫಿಲ್ಮ್ ಅವಾರ್ಡ್ಸ್, ಫಿಲ್ಮ್ಫೇರ್ ಅವಾರ್ಡ್ಸ್ ಮತ್ತು SIIIMAದಂತಹ ಪ್ರತಿಷ್ಠಿತ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.
ಸಿನಿಮಾ ರಂಗದಲ್ಲಿಯೂ ‘ಬೆಂಕಿಪಟ್ನ’, ‘ಉಪ್ಪು ಹುಳಿ ಖಾರ’ ಮತ್ತು ‘ಮುರಳಿ ಮೀಟ್ಸ್ ಮೀರಾ’ ಚಿತ್ರಗಳಲ್ಲಿ ನಟಿಸಿರುವ ಅವರು, ‘ಮುರಳಿ ಮೀಟ್ಸ್ ಮೀರಾ’ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸೆಲೆಬ್ರಿಟಿಗಳ ಸಂದರ್ಶನಗಳನ್ನು ನಡೆಸುತ್ತಿರುವ ಅನುಶ್ರೀ ಎಲ್ಲೆಡೆ ಮನೆಮಾತಾಗಿದ್ದಾರೆ. ಒಟ್ಟಿನಲ್ಲಿ ತಮ್ಮ ಮಾತಿನ ಮೂಲಕವೇ ಇಡೀ ಕರ್ನಾಟಕ ಜನರ ಹೃದಯ ಗೆದ್ದಿರುವ ಅನುಶ್ರೀ, ಈಗ ಚಿತ್ರರಂಗದಲ್ಲಿ ಮತ್ತು ವಿವಿಧ ಕಾರ್ಯಕ್ರಮ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ.