ಬೆಂಗಳೂರು, ಫೆ. 23 (DaijiworldNews/TA): ‘ಟಾಕ್ಸಿಕ್’ ಚಿತ್ರದ ಮೂಲಕ ಯಶ್ ಅವರು ಮತ್ತೆ ಭರ್ಜರಿ ಎಂಟ್ರಿಗೆ ಸಜ್ಜಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಸಿನಿಪ್ರಿಯರ ಗಮನ ಸೆಳೆದಿದ್ದು, ವಿಶೇಷವಾಗಿ ಯಶ್ ಅವರ ಡ್ಯುಯಲ್ ಲುಕ್ ಚರ್ಚೆಗೆ ಕಾರಣವಾಗಿದೆ.

ಚಿತ್ರದಲ್ಲಿ ಅವರು ‘ರಾಯ’ ಮತ್ತು ‘ಟಿಕೆಟ್’ ಎಂಬ ಎರಡು ವಿಭಿನ್ನ ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ‘ಟಿಕೆಟ್’ ಲುಕ್ನಲ್ಲಿ ಯಶ್ ತುಂಬಾ ಯಂಗ್ ಆಗಿ ಕಾಣಿಸಿಕೊಂಡಿರುವುದು ಫ್ಯಾನ್ಸ್ಗೊಂದು ಸರ್ಪ್ರೈಸ್ ಆಗಿದೆ. ಈ ಲುಕ್ ಎಐ ಮೂಲಕ ಸೃಷ್ಟಿಸಲಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರೂ, ಇದೀಗ ಅದಕ್ಕೆ ಸ್ಪಷ್ಟನೆ ಸಿಕ್ಕಿದೆ.
ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯ್ ಕಾಂತ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಯಶ್ ಅವರ ಮೇಕೋವರ್ ಪ್ರಕ್ರಿಯೆ ಬಹಿರಂಗವಾಗಿದೆ. ಹೇರ್ ಕಟ್, ಗಡ್ಡ ಟ್ರಿಮ್ ಹಾಗೂ ಸ್ಟೈಲಿಂಗ್ ಮೂಲಕ ಯಶ್ ಅವರನ್ನು ಯಂಗ್ ಲುಕ್ನಲ್ಲಿ ತೋರಿಸಲಾಗಿದೆ. ಈ ವಿಡಿಯೋದಿಂದ ಸ್ಪಷ್ಟವಾಗಿರುವುದು ಏನೆಂದರೆ, ಲುಕ್ಗಾಗಿ ಎಐ ಬಳಕೆ ಮಾಡಲಾಗಿಲ್ಲ ಬದಲಿಗೆ ಸೂಕ್ಷ್ಮವಾದ ಗ್ರೂಮಿಂಗ್ ಮತ್ತು ಸ್ಟೈಲಿಂಗ್ ಮೂಲಕ ಈ ಬದಲಾವಣೆ ತರಲಾಗಿದೆ.
ಕೆಜಿಎಫ್ ಮತ್ತು ಕೆಜಿಎಫ್ ಚಾಪ್ಟರ್2 ಸಿನಿಮಾಗಳಲ್ಲಿ ಯಶ್ ತೋರಿಸಿದ ಪರ್ಫೆಕ್ಷನ್ ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿತ್ತು. ‘ಟಾಕ್ಸಿಕ್’ ಸಿನಿಮಾದಲ್ಲಿ ಅವರ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಈ ಚಿತ್ರಕ್ಕೆ ಅವರು ಕಥೆ ಬರೆದಿರುವುದರ ಜೊತೆಗೆ ನಿರ್ಮಾಪಕರಲ್ಲಿಯೂ ಒಬ್ಬರಾಗಿದ್ದಾರೆ. ಹೀಗಾಗಿ ಮೇಕಿಂಗ್ನ ಪ್ರತಿಯೊಂದು ಹಂತದಲ್ಲೂ ಅವರ ಪಾತ್ರ ಮಹತ್ವದ್ದಾಗಿದೆ.
ಚಿತ್ರದಲ್ಲಿ ‘ಟಿಕೆಟ್’ ಪಾತ್ರದ ಲುಕ್ಗೆ ಯಶ್ ಸ್ವತಃ ನಿಂತು ಕೆಲಸ ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಲುಕ್ ಐಡಿಯಾ ಯಾರದ್ದು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ. ‘ಟಾಕ್ಸಿಕ್’ ಚಿತ್ರಕ್ಕೆ ಸಂಬಂಧಿಸಿದಂತೆ ಭರ್ಜರಿ ಈವೆಂಟ್ ಆಯೋಜನೆ ಮಾಡುವ ಸಾಧ್ಯತೆ ಇದೆ. ಟೀಸರ್ನಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾಗಾಗಿ ಫ್ಯಾನ್ಸ್ ಆತುರದಿಂದ ಕಾಯುತ್ತಿದ್ದಾರೆ.