ಹೈದರಾಬಾದ್, ಮಾ. 06 (DaijiworldNews/TA): ಬಾಲಿವುಡ್ ನಟಿ ಜಾನ್ವಿ ಕಪೂರ್ ಇಂದು, ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ವಿಶೇಷ ದಿನವನ್ನು ಅವರು ಭಕ್ತಿಭಾವದಿಂದ ಆಚರಿಸಿಕೊಂಡಿದ್ದು, ಆಂಧ್ರಪ್ರದೇಶದಲ್ಲಿರುವ ಪ್ರಸಿದ್ಧ ತಿರುಮಲ ವೆಂಕಟೇಶ್ವರ ದೇವಸ್ಥಾನಗೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಪ್ರತಿ ವರ್ಷದಂತೆ ಈ ಬಾರಿಯೂ ಅವರು ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲೇ ಏರಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಸುಮಾರು 3,550 ಮೆಟ್ಟಿಲುಗಳನ್ನು ಅವರು ಬರಿಗಾಲಿನಲ್ಲಿ ಹತ್ತಿ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ.

ಸುಮಾರು 9ರಿಂದ 12 ಕಿಲೋಮೀಟರ್ ದೂರದ ಈ ಹಾದಿಯನ್ನು ಕ್ರಮಿಸಲು ಅವರಿಗೆ ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ಹಿಡಿದಿತು. ತಿರುಪತಿ ಬೆಟ್ಟ ಹತ್ತುವಾಗ ಜಾನ್ವಿ ಅವರು ಬಿಳಿ ಬಣ್ಣದ ಹೂವಿನ ವಿನ್ಯಾಸದ ಕುರ್ತಾ ಧರಿಸಿಕೊಂಡು ಸರಳವಾಗಿ ಕಾಣಿಸಿಕೊಂಡರು. ಅವರ ಈ ಭಕ್ತಿಭಾವದ ಕ್ಷಣಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ‘ಸರಳತೆಯಲ್ಲಿ ನೀವು ನಿಮ್ಮ ತಾಯಿ ಶ್ರೀದೇವಿ ಅವರಂತೆಯೇ ಕಾಣುತ್ತಿದ್ದೀರಿ’ ಎಂದು ಕಾಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಜಾನ್ವಿ ತಿರುಪತಿಗೆ ಭೇಟಿ ನೀಡುವಾಗ ಅವರ ಆಪ್ತ ಗೆಳೆಯ ಶಿಖರ್ ಪಹರಿಯಾ ಕೂಡ ಜೊತೆಯಾಗಿರುತ್ತಾರೆ. ಆದರೆ ಈ ಬಾರಿ ಶಿಖರ್ ಅವರ ಅನುಪಸ್ಥಿತಿ ಗಮನ ಸೆಳೆದಿದ್ದು, ಜಾನ್ವಿ ತಮ್ಮ ಸ್ನೇಹಿತರೊಂದಿಗೆ ಬೆಟ್ಟ ಹತ್ತಿರುವುದು ವಿಶೇಷವಾಗಿತ್ತು. ಪ್ರತಿ ವರ್ಷ ತಮ್ಮ ತಾಯಿ ಶ್ರೀದೇವಿಯವರ ಜನ್ಮದಿನದಂದೂ ಜಾನ್ವಿ ತಿರುಪತಿಗೆ ಭೇಟಿ ನೀಡುವುದು ಅವರ ವಿಶೇಷ ಪರಂಪರೆಯಾಗಿದೆ.
ತಮ್ಮ ಆಧ್ಯಾತ್ಮಿಕ ನಂಬಿಕೆಯ ಬಗ್ಗೆ ಈ ಹಿಂದೆ ಮಾತನಾಡಿದ್ದ ಜಾನ್ವಿ, ಕಳೆದ ಐದು ರಿಂದ ಆರು ವರ್ಷಗಳಿಂದ ಆಧ್ಯಾತ್ಮದ ಕಡೆ ಹೆಚ್ಚು ಒಲವು ಬೆಳೆದಿದೆ ಎಂದು ಹೇಳಿದ್ದರು. ವೆಂಕಟೇಶ್ವರ ಸ್ವಾಮಿಯ ಮೇಲೆ ಅಪಾರ ನಂಬಿಕೆ ಇದೆ. ಒಳಗಿನಿಂದ ಕರೆ ಬಂದಂತೆ ಅನಿಸಿದಾಗಲೆಲ್ಲಾ ತಿರುಪತಿಗೆ ಬಂದು ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆಯುತ್ತೇನೆ ಎಂದು ಅವರು ಹೇಳಿಕೊಂಡಿದ್ದರು.
ಚಿತ್ರರಂಗದ ವಿಚಾರಕ್ಕೆ ಬಂದರೆ, ಇತ್ತೀಚಿನ ವರ್ಷಗಳಲ್ಲಿ ಜಾನ್ವಿ ಕಪೂರ್ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2025ರಲ್ಲಿ ಅವರ ಅಭಿನಯದ ಹೋಮ್ಬಾಂಡ್, ಪರಮ ಸುಂದರಿ ಹಾಗೂ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಸಿನಿಮಾಗಳು ಬಿಡುಗಡೆಯಾಗಿದ್ದವು. ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ಅವರು ಗಮನ ಹರಿಸುತ್ತಿದ್ದು, ನಟ ರಾಮ್ ಚರಣ್ ಜೊತೆಗಿನ ಪೆದ್ದಿ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ. ಈ ಸಿನಿಮಾ ಏಪ್ರಿಲ್ 30ರಂದು ತೆರೆಕಾಣಲಿದೆ.