ಮುಂಬೈ, ಮಾ. 07 (DaijiworldNews/AA): ಹರಿಯಾಣ್ವಿ ಭಾಷೆಯಲ್ಲಿ ಇತ್ತೀಚಿಗೆ ಬಿಡುಗಡೆಯಾದ ಖ್ಯಾತ ರಾಪರ್, ಸಂಗೀತಗಾರ ಬಾದ್ ಶಾ ಅವರ 'ಟಟೀರಿ' ಹಾಡಿನಲ್ಲಿ ಮಹಿಳೆಯರನ್ನು ಅವಹೇಳನ ಮಾಡುವ ಮತ್ತು ಅಶ್ಲೀಲ ಸಾಹಿತ್ಯ ಮತ್ತು ದೃಶ್ಯಗಳನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾದ ಬಳಿಕ ಬಾದ್ ಶಾ ದೇಶ ಬಿಟ್ಟು ಹೋಗದಂತೆ ಅವರ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪಂಚಕುಲ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ತಕ್ಷಣವೇ ಪೊಲೀಸರ ಮುಂದೆ ಹಾಜರಾಗುವಂತೆ ಬಾದ್ಶಾ ಅವರಿಗೆ ಸೂಚಿಸಿದ್ದಾರೆ. ಜೊತೆಗೆ ಅವರ ಬಂಧನಕ್ಕಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಬಾದ್ಶಾ ಅವರ ಸಂಗೀತ ವೀಡಿಯೊದಲ್ಲಿ ಆಕ್ಷೇಪಾರ್ಹ ಸಾಹಿತ್ಯ ಮತ್ತು ದೃಶ್ಯಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಪಂಚಕುಲ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಹಿಳೆಯರ ಅಸಭ್ಯವಾಗಿ ತೋರಿಸುವ ನಿಷೇಧ ಕಾಯ್ದೆ 1986 ರ ಸೆಕ್ಷನ್ 3 ಮತ್ತು 4 ಮತ್ತುBNS ಸೆಕ್ಷನ್ 296 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಅಡಿಯಲ್ಲಿ ಬಾದ್ ಶಾ ವಿರುದ್ಧ ಪ್ರಕರಣ ದಾಖಲಾಗಿದೆ.