ಹೈದರಾಬಾದ್, ಮಾ. 13 (DaijiworldNews/AA): 'ತಾವು ಜೀವನದಲ್ಲಿ ಇನ್ನೊಮ್ಮೆ ಇಂಥಹಾ ಘೋರ ತಪ್ಪು ಮಾಡುವುದಿಲ್ಲ, ಇದೊಂದು ಬಾರಿ ನನ್ನನ್ನು ಕ್ಷಮಿಸಿಬಿಡಿ' ಎಂದು ತೆಲುಗು ಚಿತ್ರರಂಗದ ಹಿರಿಯ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಪ್ರಸಾದ್ ಅವರು ತಮಿಳು ಜನರ ಬಳಿ ಕ್ಷಮೆ ಕೇಳಿದ್ದಾರೆ.

ಕೆಲ ದಿನಗಳ ಹಿಂದೆ ರಾಜೇಂದ್ರ ಪ್ರಸಾದ್ ಅವರಿಗೆ ಕಾಂತಾರಾವ್ ಪ್ರಶಸ್ತಿ ನೀಡಲಾಯ್ತು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಕಾಂತಾರಾವ್ ಅವರ ನಟನೆಯನ್ನು ಹೊಗಳುತ್ತಾ, ತಮಿಳು ಚಿತ್ರರಂಗದ ದಿಗ್ಗಜ ನಟ, ಮಾಜಿ ಸಿಎಂ ಸಹ ಆಗಿರುವ ಎಂಜಿಆರ್ ಅವರ ಬಗ್ಗೆ ರಾಜೇಂದ್ರ ಪ್ರಸಾದ್ ಆಡಿದ್ದ ಕೀಳು ಮಾತುಗಳನ್ನು ಆಡಿದ್ದರು. ಇದೀಗ ತಾವು ಆಡಿದ ಮಾತಿನಿಂದ ಆಗಿರುವ ವಿವಾದದ ಬಗ್ಗೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
"ಕಾಂತಾರಾವ್ ಮಾಡುತ್ತಿದ್ದ ಸಿನಿಮಾ, ಅವರ ಜನಪದ ಶೈಲಿನ ನಟನೆಯನ್ನು ನೋಡಿ ಎಂಜಿಆರ್ ಅಂಥಹವರೇ ಪ್ಯಾಂಟಿನಲ್ಲಿ ಮೂತ್ರವಿಸರ್ಜನೆ ಮಾಡಿಕೊಳ್ಳುತ್ತಿದ್ದರು. ಇವನ್ಯಾರಯ್ಯ, ಭಾರತೀಯ ಸಿನಿಮಾವನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತಾನೆ ಎಂದು ಅವರು ಭಯಗೊಂಡು ಮೂತ್ರ ಮಾಡಿಕೊಳ್ಳುತ್ತಿದ್ದರು" ಎಂದು ಹೇಳಿದ್ದರು.
"ಎಂಜಿಆರ್, ತಮಿಳು ಚಿತ್ರರಂಗದ ದೇವರು. ನಾನು ಅವರನ್ನು ಟೀಕೆ ಮಾಡುವಷ್ಟು ದೊಡ್ಡವನಲ್ಲ. ನಾನು ಮದ್ರಾಸ್ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಕಲಿಯುವಾಗ ಅವರು ಸಿಎಂ, ಅವರು ಸಹ ಒಮ್ಮೆ ನಮ್ಮ ಇನ್ಸ್ಟಿಟ್ಯೂಟಿಗೆ ಭೇಟಿ ನೀಡಿದ್ದರು. ಅವರೊಬ್ಬ ಮಹಾನ್ ನಟ. ಕಾಂತಾರಾವ್ ಅವರ ಬಗ್ಗೆ ಲೋಕಾಭಿರಾಮವಾಗಿ ಮಾತನಾಡುವಾಗ ನನ್ನ ಬಾಯಿಂದ ಅದೊಂದು ವಾಕ್ಯ ತಪ್ಪಿ ಬಂದುಬಿಟ್ಟಿತು. ನಾನು ಎಂಜಿಆರ್ ಬಗ್ಗೆ ಅಪಾರ ಗೌರವ ಉಳ್ಳವನು. ಈ ಬಾರಿ ನನ್ನನ್ನು ಕ್ಷಮಿಸಿಬಿಡಿ, ಮುಂದೆ ಜೀವನದಲ್ಲಿ ಇನ್ನೆಂದೂ ಇಂಥಹಾ ತಪ್ಪು ನಾನು ಮಾಡುವುದಿಲ್ಲ" ಎಂದು ಕೈ ಮುಗಿದು ಕ್ಷಮೆಯಾಚಿಸಿದ್ದಾರೆ.
ಎಂಜಿಆರ್ ಅವರ ಬಗ್ಗೆ ರಾಜೇಂದ್ರ ಪ್ರಸಾದ್ ಆಡಿದ್ದ ಮಾತನ್ನು ತಮಿಳು ಸಿನಿಮಾ ಪ್ರೇಮಿಗಳು ಮಾತ್ರವಲ್ಲದೆ ತಮಿಳು ಚಿತ್ರರಂಗದ ಪ್ರಮುಖ ನಟರುಗಳಾದ ನಾಸರ್, ನಟ ವಿಶಾಲ್ ಇನ್ನೂ ಹಲವರು ಖಂಡಿಸಿದ್ದರು. ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದರು. ಅದರಂತೆ ಇದೀಗ ನಟ ರಾಜೇಂದ್ರ ಪ್ರಸಾದ್ ಕ್ಷಮೆ ಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.