ಹೈದರಾಬಾದ್, ಮಾ. 26 (DaijiworldNews/TA): ಒಂದು ಕಾಲದಲ್ಲಿ ಭಾರತೀಯ ಸಿನಿರಂಗದಲ್ಲಿ ಹೊಸ ಶೈಲಿಯನ್ನು ಪರಿಚಯಿಸಿದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸಿನಿಮಾಗಳಿಗಿಂತ ಹೆಚ್ಚು, ತಮ್ಮ ವೃತ್ತಿಜೀವನದ ಮಹತ್ವದ ನಿರ್ಧಾರದಿಂದ ಗಮನ ಸೆಳೆದಿದ್ದಾರೆ. ತಾವು ಇನ್ನು ಮುಂದೆ ತೆಲುಗು ಸಿನಿಮಾಗಳನ್ನು ಮಾಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

ಗಲಾಟಾ ಪ್ಲಸ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರವು ತಮ್ಮ ಆಲೋಚನಾ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಹೇಳಿದ್ದಾರೆ. ಈ ಚಿತ್ರದ ಮೇಕಿಂಗ್ ಮತ್ತು ರಿಯಲಿಸ್ಟಿಕ್ ಶೈಲಿ ತಮ್ಮ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಅವರು ವಿವರಿಸಿದ್ದಾರೆ.
“ಈ ಸಿನಿಮಾ ಭಾರತೀಯ ಚಿತ್ರರಂಗದ ಹಳೆಯ ಸೂತ್ರಗಳನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದೆ. ಅತಿರಂಜಿತ ಆಕ್ಷನ್ ಮತ್ತು ಅತಿಯಾದ ಹೀರೋಗಿರಿ ಇರುವ ಸಿನಿಮಾಗಳ ಕಾಲ ಮುಗಿದಿದೆ,” ಎಂದು ಆರ್ಜಿವಿ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಹಿಂದಿನ ‘ಗಾಡ್ ಫಾದರ್’ ಮಾದರಿಯ ಸಿನಿಮಾಗಳು ಈಗಿನ ಹೊಸ ತಲೆಮಾರಿನ ಸಿನಿಮಾಗಳ ಮುಂದೆ ಮಂಕಾಗಿ ಕಾಣುತ್ತವೆ ಎಂಬುದನ್ನು ಅವರು ಸ್ವತಃ ಒಪ್ಪಿಕೊಂಡಿದ್ದಾರೆ.
ಇನ್ನು ಮುಂದೆ ಹೊಸ ಶೈಲಿಯಲ್ಲಿ, ಹೊಸ ದೃಷ್ಟಿಕೋನದೊಂದಿಗೆ ನಿರ್ದೇಶನ ಮಾಡಲು ಬಯಸುತ್ತಿರುವ ಅವರು, “ನಾನು ಹಿಂದಿನ ಸಿನಿಮಾಗಳನ್ನೆಲ್ಲ ಮರೆತು, ಹೊಸದಾಗಿ ಹುಟ್ಟಿದ ನಿರ್ದೇಶಕನಂತೆ ಕೆಲಸ ಮಾಡಬೇಕೆಂದು ಬಯಸುತ್ತೇನೆ” ಎಂದಿದ್ದಾರೆ. ಪ್ರೇಕ್ಷಕರು ಈಗ ಹೆಚ್ಚು ಬುದ್ಧಿವಂತರಾಗಿದ್ದು, ಹಳೆಯ ಮಾದರಿಯ ಸಿನಿಮಾಗಳಿಗೆ ಅವಕಾಶ ಕಡಿಮೆಯಾಗುತ್ತಿದೆ ಎಂಬುದನ್ನೂ ಅವರು ಹೇಳಿದ್ದಾರೆ.
ಇದೇ ಹಿನ್ನೆಲೆಯಲ್ಲೇ, ತಾವು ತೆಲುಗು ಚಿತ್ರರಂಗವನ್ನು ತ್ಯಜಿಸುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ಹೈದರಾಬಾದ್ ಬಿಟ್ಟು ಮುಂಬೈಗೆ ವಾಸ್ತವ್ಯ ಬದಲಾಯಿಸಿರುವುದಾಗಿ ಅವರು ಹೇಳಿದ್ದಾರೆ. ಪ್ರಸ್ತುತ ಅವರು ‘ಸಿಂಡಿಕೇಟ್’ ಎಂಬ ಹೊಸ ಚಿತ್ರದ ಮೇಲೆ ಕೆಲಸ ಮಾಡಲು ಸಜ್ಜಾಗಿದ್ದು, ಈ ಸಿನಿಮಾ ಜಾಗತಿಕ ಮಟ್ಟದ ಕಥಾಹಂದರ ಹೊಂದಿರಲಿದೆ. ಹಿಂದಿ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಈ ಚಿತ್ರವನ್ನು ರೂಪಿಸಲು ಅವರು ಯೋಜನೆ ಹಾಕಿಕೊಂಡಿದ್ದಾರೆ.
ತಮ್ಮದೇ ಹಳೆಯ ಹಿಟ್ ಸಿನಿಮಾಗಳು ಕೂಡ ಈಗಿನ ‘ಧುರಂಧರ್’ ತರಹದ ಸಿನಿಮಾಗಳ ಮುಂದೆ ಟಿವಿ ಸೀರಿಯಲ್ನಂತೆ ಕಾಣುತ್ತವೆ ಎಂದು ನೇರವಾಗಿ ಹೇಳಿರುವ ಆರ್ಜಿವಿ, ತಮ್ಮ ಸಂಪೂರ್ಣ ಗಮನ ಇದೀಗ ‘ಸಿಂಡಿಕೇಟ್’ ಸಿನಿಮಾದ ಮೇಲೆಯೇ ಕೇಂದ್ರೀಕರಿಸಿದ್ದಾರೆ.