ಹೈದರಾಬಾದ್, ಏ. 20 (DaijiworldNews/TA): ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ ಅವರು ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವುದು ತಿಳಿದುಬಂದಿದೆ. ಅವರ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ಅಭಿಮಾನಿಗಳಿಗೆ ಮೆಗಾ ಸ್ಟಾರ್ ಚಿರಂಜೀವಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಚಿರಂಜೀವಿ, “ಕಲ್ಯಾಣ್ ಬಾಬು ಯಶಸ್ವಿಯಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಈಗ ಸುರಕ್ಷಿತರಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
ವೈದ್ಯರ ಸಲಹೆಯಂತೆ, ಪವನ್ ಕಲ್ಯಾಣ್ ಇನ್ನೊಂದು ವಾರದಲ್ಲಿ ತಮ್ಮ ನಿಯಮಿತ ಚಟುವಟಿಕೆಗಳಿಗೆ ಮರಳಲಿದ್ದಾರೆ ಎಂದು ಚಿರಂಜೀವಿ ಭರವಸೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಪ್ರೀತಿ, ಕಾಳಜಿ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ. ಉಪಮುಖ್ಯಮಂತ್ರಿಗಳ ಕಚೇರಿಯ ಮಾಹಿತಿ ಪ್ರಕಾರ, ಏಪ್ರಿಲ್ 17ರಂದು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸುತ್ತಿದ್ದ ವೇಳೆ ಪವನ್ ಕಲ್ಯಾಣ್ ಅವರಿಗೆ ಅಕಸ್ಮಾತ್ ಅನಾರೋಗ್ಯ ಕಾಣಿಸಿಕೊಂಡಿತ್ತು. ಕಳೆದ ಕೆಲವು ತಿಂಗಳುಗಳಿಂದ ಅವರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ತಿಳಿದುಬಂದಿದೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಎಂಆರ್ಐ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯ ಎಂದು ನಿರ್ಧರಿಸಿದರು. ಅದರಂತೆ ಶನಿವಾರ ಸಂಜೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು ಕನಿಷ್ಠ 10 ದಿನಗಳ ಸಂಪೂರ್ಣ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದು, ಸದ್ಯಕ್ಕೆ ಅವರ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಪೂರ್ಣ ಚೇತರಿಕೆಯ ನಂತರ ಅವರು ಮತ್ತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.