ಹೈದರಾಬಾದ್, ಏ. 23 (DaijiworldNews/AA): ದಕ್ಷಿಣ ಭಾರತದ ಜನಪ್ರಿಯ ಗಾಯಕಿ ಮಂಗ್ಲಿ ಅವರ ವಿರುದ್ಧ ಹಣಕಾಸು ವಂಚನೆ, ಬೆದರಿಕೆ, ಹಲ್ಲೆಗೆ ಬೆಂಬಲ ಇನ್ನಿತರೆ ಆರೋಪಗಳನ್ನು ಕೆಲವರು ಮಾಡಿದ್ದು, ದೂರು ಸಹ ದಾಖಲಾಗಿದ್ದು, ದೂರು ಸಹ ದಾಖಲಾಗಿದೆ.

ಮೈಕ್ರೋ ಫೈನಾನ್ಸ್ ಮತ್ತು 'ಶುಭಾಕ್ಷೇತ್ರ ಇನ್ಫ್ರಾ' ಹೆಸರಿನಲ್ಲಿ ನಡೆದ ಕೋಟ್ಯಂತರ ರೂಪಾಯಿಗಳ ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗ್ಲಿ ಅವರ ವಿರುದ್ಧ ಕ್ರಿಮಿನಲ್ ಆರೋಪ ಹೊರಿಸಲಾಗಿದೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಇದೀಗ ಗಾಯಕಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಈ ಹಗರಣದಲ್ಲಿ ಮೋಸಹೋದ ಸಂತ್ರಸ್ತರಿಗೆ ಅನ್ಯಾಯವಾಗಿದ್ದು, ಅವರಿಗೆ ನ್ಯಾಯ ಸಿಗುವವರೆಗೂ ತಾನು ಬೆಂಬಲವಾಗಿ ನಿಲ್ಲುತ್ತೇನೆ. ಆದರೆ ಹಣಕಾಸು ವಂಚನೆ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ" ಎಂದಿದ್ದಾರೆ.
"ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ತನ್ನ ಹೆಸರನ್ನು ಈ ಪ್ರಕರಣಕ್ಕೆ ಎಳೆದು ತರುತ್ತಿದ್ದಾರೆ ಮತ್ತು ತನ್ನ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಸತ್ಯ ಖಂಡಿತವಾಗಿಯೂ ಹೊರಬರುತ್ತದೆ. ನನಗೆ ಭಾರತದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ಗೌರವ ಹಾಗೂ ನಂಬಿಕೆಯಿದೆ. ಕಾನೂನು ಪ್ರಕ್ರಿಯೆಯ ಮೂಲಕವೇ ಎಲ್ಲವೂ ಸ್ಪಷ್ಟವಾಗಲಿದೆ" ಎಂದು ಅವರು ಹೇಳಿದ್ದಾರೆ.