ಹೈದರಾಬಾದ್,ಏ. 28 (DaijiworldNews/TA): ‘ಕಾಂತಾರ’ ಹಿಟ್ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ರಿಷಬ್ ಶೆಟ್ಟಿ ಅವರ ಸಿನಿಮಾಗಳಿಗೆ ಈಗ ದೊಡ್ಡ ಮಟ್ಟದ ನಿರೀಕ್ಷೆ ನಿರ್ಮಾಣವಾಗಿದೆ. ಅವರು ಅಭಿನಯಿಸಿದ ಹೊಸ ಸಿನಿಮಾ ತೆರೆಗೆ ಬರಲಿದೆ ಎಂದರೆ ಅದು ಸುದ್ದಿಯಾಗುವುದು ಸಹಜ. ಆದರೆ, ಈ ಬಾರಿ ಅವರೊಬ್ಬರ ಚಿತ್ರ ಸದ್ದಿಲ್ಲದೆ ತೆರೆಗೆ ಬರಲು ಸಜ್ಜಾಗಿದೆ. ಅದೇ ‘ಎ ಫಿಲ್ಮ್ ಬೈ ಗಿರಿ’.

2022ರಲ್ಲಿ ಬಿಡುಗಡೆಯಾದ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ‘ಕಾಂತಾರ’ಗೂ ಮೊದಲು ಬಂದಿದ್ದು, ಸರಾಸರಿ ಯಶಸ್ಸು ಕಂಡಿತ್ತು. ಈ ಚಿತ್ರ ಈಗ ತೆಲುಗು ಭಾಷೆಗೆ ಡಬ್ ಆಗಿ ಮೇ 8ರಂದು ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ನಿರ್ಧಾರ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಟ್ರೇಲರ್ ಕೂಡ ಈಗಾಗಲೇ ಬಿಡುಗಡೆಗೊಂಡಿದೆ.
ರಿಷಬ್ ಶೆಟ್ಟಿ ಈಗ ಕನ್ನಡಕ್ಕೆ ಸೀಮಿತವಾಗಿರದೆ, ತೆಲುಗು ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ. ವಿಶೇಷವಾಗಿ ಅವರು ಅಭಿನಯಿಸುತ್ತಿರುವ ಜೈ ಹನುಮಾನ್ ಚಿತ್ರದ ಕಾರಣದಿಂದ ಅವರ ಮೇಲೆ ಆ ಭಾಗದಲ್ಲೂ ಗಮನ ಹೆಚ್ಚಿದೆ. ಹೀಗಾಗಿ, ‘ಎ ಫಿಲ್ಮ್ ಬೈ ಗಿರಿ’ ಚಿತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರೆ ಹೆಚ್ಚು ಪ್ರೇಕ್ಷಕರನ್ನು ಸೆಳೆಯಬಹುದು ಎಂಬ ನಿರೀಕ್ಷೆ ಚಿತ್ರತಂಡದದ್ದು ಎಂದು ಹೇಳಲಾಗುತ್ತಿದೆ.
ಈ ಚಿತ್ರವನ್ನು ಕರಣ್ ಆನಂದ್ ಮತ್ತು ಅನಿರುದ್ಧ ಮಹೇಶ್ ನಿರ್ದೇಶಿಸಿದ್ದು, ಗಿರಿ ಕೃಷ್ಣ ಕಥೆ ಬರೆದಿದ್ದಾರೆ. ರಿಷಬ್ ಶೆಟ್ಟಿ ಜೊತೆಗೆ ತಪಸ್ವಿನಿ ಪೂಣಚ್ಚ, ರಚನಾ ಇಂದರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಹಾಗೂ ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರವನ್ನು, ಈಗ ಎಂಜಿ ಮೂವೀಸ್ ಮೂಲಕ ಅಚ್ಚಿಬಾಬು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.