ಬೆಂಗಳೂರು, ಏ. 29 (DaijiworldNews/TA): ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಬಿಡುಗಡೆ ಮತ್ತೆ ಮುಂದೂಡಲಾಗಿದೆ. ಜೂನ್ 4ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಈಗ ಹೊಸ ದಿನಾಂಕದ ನಿರೀಕ್ಷೆಯಲ್ಲಿದೆ. ಈ ಬೆಳವಣಿಗೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ನಡೆದ CinemaCon ನಲ್ಲಿ ಈ ಸಿನಿಮಾಗೆ ಜಾಗತಿಕ ಮಟ್ಟದಲ್ಲಿ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ವಿಶ್ವದ ವಿವಿಧ ವಿತರಕರಿಂದ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವ ಬೇಡಿಕೆ ಬಂದ ಹಿನ್ನೆಲೆ, ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ.
ಈ ಕುರಿತು ಯಶ್ ಮಾತನಾಡಿ, “ಈ ಸಿನಿಮಾ ನನ್ನ ಪಾಲಿಗೆ ವಿಶೇಷ ಪ್ರಯಾಣ. ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದರಿಂದ, ಚಿತ್ರವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರುವ ಉದ್ದೇಶದಿಂದ ಬಿಡುಗಡೆಯ ದಿನಾಂಕ ಬದಲಿಸಿದ್ದೇವೆ. ಅಭಿಮಾನಿಗಳು ಹೆಮ್ಮೆಪಡುವಂತಹ ಚಿತ್ರ ನೀಡುತ್ತೇವೆ,” ಎಂದು ತಿಳಿಸಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಸಿನಿಮಾ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಅಂತರಾಷ್ಟ್ರೀಯ ವಿತರಣೆ ಹಾಗೂ ಸಹಭಾಗಿತ್ವದ ಮೇಲೆ ಗಮನ ಹರಿಸುತ್ತಿದೆ.