ಹೈದರಾಬಾದ್, ಮೇ. 03 (DaijiworldNews/AK): ಟಾಲಿವುಡ್ನ ಖ್ಯಾತ ವಿತರಕ ಮತ್ತು ನಿರ್ಮಾಪಕ ಸುನಿಲ್ ನಾರಂಗ್ ಅವರ ಪುತ್ರಿ ಸಿಮ್ರಾನ್ ನಾರಂಗ್ ಅವರ ವಿವಾಹ ಆರತಕ್ಷತೆ ಶನಿವಾರ (ಮೇ 2) ರಾತ್ರಿ ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ಜರುಗಿತು.

ಈ ಸಮಾರಂಭದಲ್ಲಿ ತೆಲುಗು ಚಿತ್ರರಂಗದ ದಿಗ್ಗಜರಾದ ಚಿರಂಜೀವಿ, ನಾಗಾರ್ಜುನ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಆದರೆ, ಎಲ್ಲರ ಕಣ್ಣು ಮಾತ್ರ ಮಾಜಿ ದಂಪತಿಗಳಾದ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರ ಮೇಲೆ. ಆ ಸಂದರ್ಭದ ಕೆಲವು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.
ವಿಶೇಷವೆಂದರೆ, ಸಮಂತಾ ಮತ್ತು ನಾಗ ಚೈತನ್ಯ ತಮ್ಮ ತಮ್ಮ ಹೊಸ ಜೀವನ ಸಂಗಾತಿಗಳ ಜೊತೆಗೂಡಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಮಂತಾ ಅವರು ಪತಿ, ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಕಾಣಿಸಿಕೊಂಡರೆ, ನಾಗ ಚೈತನ್ಯ ಅವರು ಪತ್ನಿ ಶೋಭಿತಾ ಧುಲಿಪಾಲ ಅವರ ಜೊತೆ ಆಗಮಿಸಿದರು.
ಇವರ ಜೊತೆಯಲ್ಲಿ ನಾಗಾರ್ಜುನ ಮತ್ತು ಅಮಲಾ ಕೂಡ ವೇದಿಕೆಯ ಮೇಲೆ ನವ ದಂಪತಿಗಳಿಗೆ ಶುಭ ಹಾರೈಸಿದರು.
ಒಂದೇ ಸಮಾರಂಭದಲ್ಲಿ ಇಬ್ಬರೂ ಕಾಣಿಸಿಕೊಂಡರೂ, ಸಮಂತಾ ಮತ್ತು ಚೈತನ್ಯ ಪರಸ್ಪರ ಮಾತನಾಡಿದ ಅಥವಾ ಎದುರಾದ ಯಾವುದೇ ವಿಡಿಯೋಗಳು ಲಭ್ಯವಾಗಿಲ್ಲ. ಇಬ್ಬರೂ ಬೇರೆ ಬೇರೆ ಸಮಯದಲ್ಲಿ ವೇದಿಕೆ ಏರಿ ಶುಭ ಹಾರೈಸಿದರು. ಆದರೆ, ಅಭಿಮಾನಿಗಳು ಮಾತ್ರ ಈ ದೃಶ್ಯಗಳನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಸುತ್ತಿದ್ದಾರೆ. ‘ಎಲ್ಲರೂ ಈಗ ಅವರವರ ಜೀವನದಲ್ಲಿ ಸಂತೋಷವಾಗಿದ್ದಾರೆ, ಯಾರಿಗೂ ದೃಷ್ಟಿ ತಾಕದಿರಲಿ’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.