ಮುಂಬೈ, ಜೂ. 03 (DaijiworldNews/AA): ದೇಹದ ತೂಕ ಇಳಿಸಿಕೊಂಡು ಸುಂದರವಾಗಿ ಕಾಣಲು ನನ್ನ ದೇಹಕ್ಕೆ ನಾನೇ ಹಿಂಸೆ ನೀಡಿದ್ದೆ. ನಮ್ಮ ನೈಜ ರೂಪವನ್ನು ಪ್ರೀತಿಸುವುದೇ ನಿಜವಾದ ಸೌಂದರ್ಯ ಎಂದು ಬಾಲಿವುಡ್ ನಟಿ ತಾಪ್ಸಿ ಪನ್ನು ಹೇಳಿದ್ದಾರೆ.

ತಮ್ಮ ಇನ್ಸ್ಟಾಗ್ರಾಂನಲ್ಲಿ ವೇಟ್ಲಾಸ್ ಜರ್ನಿಯ ಅನುಭವವನ್ನ ಹಂಚಿಕೊಂಡ ಅವರು, "ಬಾಲ್ಯದಿಂದಲೇ ಫಿಟ್ ಆಗಿದ್ದರೂ ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ಕೊಬ್ಬು ಉಳಿಯುತ್ತಿತ್ತು. ಇದನ್ನು ಕಡಿಮೆ ಮಾಡಲು ಹೆಚ್ಚು ವ್ಯಾಯಾಮ ಮಾಡುತ್ತಿದ್ದೆ. ಅತಿಯಾದ ವ್ಯಾಯಾಮದಿಂದ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿ ಸಂಗ್ರಹವಾಗಬಹುದು. ಇದರಿಂದ ಹೊಟ್ಟೆಯ ಕೆಳಭಾಗದಲ್ಲಿ ಉಬ್ಬರ ಅಥವಾ ಕೊಬ್ಬು ಇದ್ದಂತೆ ಕಾಣಿಸುವುದು ಸಾಮಾನ್ಯ" ಎಂದು ತಿಳಿಸಿದ್ದಾರೆ.
"ಪ್ರತಿ ಮಹಿಳೆಯ ದೇಹ ವಿಭಿನ್ನವಾಗಿರುತ್ತದೆ. ಹಾರ್ಮೋನ್ ಬದಲಾವಣೆಗಳಿಂದ ದೇಹದ ರೂಪವೂ ಬದಲಾಗುತ್ತಿರುತ್ತದೆ. ಹೀಗಾಗಿ ಪ್ರತಿದಿನ ಒಂದೇ ರೀತಿ ಕಾಣಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ" ಎಂದಿದ್ದಾರೆ.
"ಮಹಿಳೆಯರಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ಕೊಬ್ಬು ಮತ್ತು ನೀರಿನ ಅಂಶ ಇರುವುದು ಸಹಜ. ಇದು ಸಂತಾನೋತ್ಪತ್ತಿ ಅಂಗಗಳ ರಕ್ಷಣೆಗೆ ಸಹಕಾರಿಯಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಫಿಟ್ ಆಗಿ ಕಾಣುವ ಪೋಟೋಗಳಿಗೆ ಮಾರು ಹೋಗಿ, ನೀವು ಅದೇ ರೀತಿ ಕಾಣಬೇಕು ಎಂದು ನಿಮ್ಮನ್ನೇ ನೀವು ಹಿಂಸಿಸಿಕೊಳ್ಳಬೇಡಿ. ಮಹಿಳೆಯರಿಗೆ ಸ್ವಲ್ಪ ಹೊಟ್ಟೆ ಉಬ್ಬರ ಅಥವಾ ಕೊಬ್ಬು ಇರುವುದು ಆರೋಗ್ಯಕರ" ಎಂದು ಅಭಿಪ್ರಾಯಪಟ್ಟಿದ್ದಾರೆ.
"ತಮ್ಮ ರೂಪದ ಬಗ್ಗೆ ಬಾಲ್ಯದಲ್ಲಿ ಇದ್ದ ಅಸಮಾಧಾನವನ್ನು ತಾಪ್ಸಿ ನೆನಪಿಸಿಕೊಂಡಿದ್ದಾರೆ. ದೊಡ್ಡ ಮೂಗು ಮತ್ತು ಗುಂಗುರು ಕೂದಲಿನ ಕಾರಣದಿಂದ ತಾವು ಇತರ ನಟಿಯರಂತೆ ಕಾಣುವುದಿಲ್ಲ ಎಂದು ಭಾವಿಸಿದ್ದೆ. ಕೂದಲು ಸ್ಟ್ರೇಟ್ ಮಾಡಲು ಕೆಮಿಕಲ್ ಟ್ರೀಟ್ಮೆಂಟ್ ಮಾಡಿಸಿಕೊಂಡು ನನ್ನ ಕೂದಲನ್ನು ನಾನೇ ಹಾಳು ಮಾಡಿಕೊಂಡೆ. ವರ್ಷಗಳ ಬಳಿಕ ನಾನು ಹೇಗಿದ್ದೆನೋ ಹಾಗೆ ಒಪ್ಪಿಕೊಳ್ಳಲು ಕಲಿತೆ. ನಮ್ಮ ನೈಜ ರೂಪವನ್ನು ಪ್ರೀತಿಸುವುದೇ ನಿಜವಾದ ಸೌಂದರ್ಯ" ಎಂದು ವಿವರಿಸಿದ್ದಾರೆ.