ಮುಂಬೈ, ಜೂ. 07 (DaijiworldNews/AA): ನಟಿ ಜಾನ್ವಿ ಕಪೂರ್ ಅಭಿನಯದ ಪೆದ್ದಿ ಸಿನಿಮಾ ಬಿಡುಗಡೆಯಾದ ಬಳಿಕ ಅವರ ಪಾತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮತ್ತು ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆ ಅವರ ಮೇಕಪ್ ಆರ್ಟಿಸ್ಟ್ ಸವ್ಲೀನ್ ಕೌರ್ ಮಂಚಂದಾ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಒಬ್ಬ ನಟಿ ಆಯ್ಕೆ ಮಾಡಿಕೊಂಡ ಪಾತ್ರಕ್ಕಾಗಿ ಅವರನ್ನು ಮಾತ್ರ ದೂಷಿಸುವುದು ಸರಿಯಲ್ಲ. ಪೋಸ್ಟ್-ಪ್ರೊಡಕ್ಷನ್ ಹಂತದಲ್ಲೇ ಜಾನ್ವಿ ಕಪೂರ್ ಕೆಲವು ದೃಶ್ಯಗಳ ಬಗ್ಗೆ ಪ್ರಶ್ನಿಸಿದ್ದರು. ಮಹಿಳೆಯರನ್ನು ಅತೀ ಮಾದಕತೆಯಿಂದ ಚಿತ್ರಿಸುವ ದೃಶ್ಯಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಜಾನ್ವಿ ತಮ್ಮ ವೃತ್ತಿಪರ ನಿಲುವನ್ನು ಸ್ಪಷ್ಟಪಡಿಸಿದ್ದರು" ಎಂದಿದ್ದಾರೆ.
"ಅಷ್ಟೇ ಅಲ್ಲ ಕೆಲವು ದೃಶ್ಯಗಳಲ್ಲಿ ಬಳಸಲಾದ ಕ್ಯಾಮೆರಾ ಆ್ಯಂಗಲ್ಗಳ ಬಗ್ಗೆ ಜಾನ್ವಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾದಲ್ಲಿ ಆ ದೃಶ್ಯಗಳನ್ನು ಉಳಿಸಿಕೊಳ್ಳಲಾಗಿದೆ" ಎಂದು ಆರೋಪಿಸಿದ್ದಾರೆ.