ಮುಂಬೈ, ಜೂ. 08 (DaijiworldNews/AA): 80 ಕೆಜಿ ತೂಕ ಎತ್ತುವ ವೇಳೆ ಸೇಫ್ಟಿ ಬೆಲ್ಟ್ ಧರಿಸದೆ ಗಾಯಗೊಂಡಿದ್ದು, ಹೀಗಾಗಿ ಸುಮಾರು 40 ದಿನಗಳ ಕಾಲ ಬೆಡ್ರೆಸ್ಟ್ ಮಾಡುವಂತಾಯಿತು ಎಂದು ನಟಿ ರಕುಲ್ ಪ್ರೀತ್ ಸಿಂಗ್ ತಿಳಿಸಿದ್ದಾರೆ.

ವರ್ಕೌಟ್ ಮಾಡುವಾಗ ಮಾಡಿಕೊಂಡ ಎಡವಟ್ಟಿನ ಕುರಿತು ಸ್ವತಃ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, "80 ಕೆಜಿ ತೂಕದ ಡೆಡ್ಲಿಫ್ಟ್ ಮಾಡುವಾಗ ಸುರಕ್ಷತಾ ಬೆಲ್ಟ್ ಧರಿಸಿರಲಿಲ್ಲ. ಇದೇ ಕಾರಣದಿಂದ ಬೆನ್ನಿನ ಕೆಳಭಾಗಕ್ಕೆ ಗಂಭೀರ ಗಾಯವಾಗಿತ್ತು" ಎಂದಿದ್ದಾರೆ.
"ಬಳಿಕ ನನಗೆ ಸ್ಲಿಪ್ ಡಿಸ್ಕ್ ಸಮಸ್ಯೆ ಕಾಣಿಸಿಕೊಂಡಿದ್ದು, ಬರೊಬ್ಬರಿ 40 ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದರು. ಗಾಯದ ನೋವಿನ ಜೊತೆಗೆ ಮಾನಸಿಕವಾಗಿಯೂ ಸಾಕಷ್ಟು ತೊಂದರೆ ಅನುಭವಿಸಿದ್ದೆ" ಎಂದು ಹೇಳಿದ್ದಾರೆ.
"ಫಿಟ್ ಆಗಿರಬೇಕು ಎನ್ನುವ ಕಾರಣಕ್ಕೆ ಹಲವರು ಹೆಚ್ಚು ತೂಕ ಎತ್ತಲು ಪ್ರಯತ್ನಿಸುತ್ತಾರೆ. ಆದರೆ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಹೋದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು. ವಿಶೇಷವಾಗಿ ಡೆಡ್ಲಿಫ್ಟ್ನಂತಹ ವ್ಯಾಯಾಮ ಮಾಡುವಾಗ ಸೇಫ್ಟಿ ಬೆಲ್ಟ್ ಧರಿಸುವುದು ಅತ್ಯಗತ್ಯ. ಒಂದು ಕ್ಷಣದ ನಿರ್ಲಕ್ಷ್ಯವೂ ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು. ಅದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ" ಎಂದು ಎಚ್ಚರಿಸಿದ್ದಾರೆ.