ಬೆಂಗಳೂರು,ಜೂ. 10 (DaijiworldNews/AK): ಕನ್ನಡದ ನಟಿ ಶುಭಾ ಪೂಂಜಾ ಅವರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ಅವರೇ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಅವರ ವಿಚ್ಛೇದನದ ಸುದ್ದಿ ವೈರಲ್ ಆಗಿತ್ತು. ಈ ಎಲ್ಲಾ ಚರ್ಚೆಗಳ ನಡುವೆ ನಟಿ ಶುಭಾ ಪೂಂಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಮಾಧ್ಯಮ ಮಿತ್ರರಲ್ಲಿ ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಶುಭಾ ಪೂಂಜಾ ಅವರು 2022ರಲ್ಲಿ ಬಾಯ್ಫ್ರೆಂಡ್ ಸುಮಂತ್ ಬಿಲ್ಲವ್ ಅವರನ್ನು ಮದುವೆಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ದಂಪತಿಗಳು ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹರಡಿದ್ದವು. ಇದೇ ಸಮಯದಲ್ಲಿ ಅವರು ಪತಿ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ವಿಚ್ಛೇದನ ಪಡೆಯುತ್ತಿರುವುದರ ಬಗ್ಗೆ ಏನು ಹೇಳದ ಶುಭಾ ಪೂಂಜಾ, ಪ್ರಸ್ತುತ ಪರಿಸ್ಥಿತಿಯಲ್ಲಿ ಖಾಸಗಿತನ ಗೌರವಿಸುವಂತೆ ಕೋರಿದ್ದಾರೆ.
‘ನನ್ನ ಆತ್ಮೀಯ ಮಾಧ್ಯಮ ಮಿತ್ರರೇ, ನನ್ನ ಇಡೀ ಚಿತ್ರಜೀವನದ ಪಯಣದಲ್ಲಿ ನೀವು ನನಗೆ ಅಪಾರವಾದ ಬೆಂಬಲ, ಪ್ರೋತ್ಸಾಹ ಮತ್ತು ಪ್ರೀತಿಯನ್ನು ನೀಡಿದ್ದೀರಿ. ಅದಕ್ಕಾಗಿ ನಾನು ನಿಮಗೆ ಯಾವಾಗಲೂ ಆಭಾರಿಯಾಗಿರುತ್ತೇನೆ. ಇಂದು ನನ್ನದೊಂದು ಸಣ್ಣ ವಿನಂತಿ ಇದೆ. ದಯವಿಟ್ಟು ನನಗೆ, ಸುಮಂತ್ಗೆ ಹಾಗೂ ನಮ್ಮ ಕುಟುಂಬದವರಿಗೆ ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಕೊಂಚ ಪ್ರೈವೆಸಿ ನೀಡಿ ಎಂದು ನಾನು ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಈ ಕಠಿಣ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಗೌರವ ನಮಗೆ ಅತ್ಯಂತ ಮುಖ್ಯವಾಗಿದೆ’ ಎಂದು ಹೇಳಿದ್ದಾರೆ.
‘ಸರಿಯಾದ ಸಮಯ ಬಂದಾಗ, ನಾನೇ ವೈಯಕ್ತಿಕವಾಗಿ ನಿಮ್ಮೆಲ್ಲರೊಂದಿಗೆ ಯಾವುದೇ ಅಪ್ಡೇಟ್ ಇದ್ದರೂ ಹಂಚಿಕೊಳ್ಳುತ್ತೇನೆ. ನಿಮ್ಮ ನಿರಂತರ ಪ್ರೀತಿ, ಬೆಂಬಲ ಮತ್ತು ದಯೆಗೆ ಮತ್ತೊಮ್ಮೆ ಧನ್ಯವಾದಗಳು’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ನಟಿಯೇ ಮುಂದಿನ ದಿನಗಳಲ್ಲಿ ಸ್ಪಷ್ಟನೆ ನೀಡುವುದಾಗಿ ಹೇಳಿರುವುದರಿಂದ ಊಹಾಪೋಹಗಳಿಗೆ ಸದ್ಯ ತೆರೆ ಬಿದ್ದಿದೆ.