ಮುಂಬೈ,ಜೂ. 15 (DaijiworldNews/AK): ವಿಚ್ಛೇದನ ಪಡೆದು ಬೇರೆಯಾಗಿದ್ದ ಖ್ಯಾತ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಮಾಜಿ ಪತಿ ಮೊಹ್ಸಿನ್ ಅಖ್ತರ್ ಭಾನುವಾರ ಮತ್ತೊಂದು ಮದುವೆಯಾಗಿದ್ದಾರೆ.

ನಟಿ ಊರ್ಮಿಳಾ ಅವರಿಂದ ದೂರವಾದ ಎರಡು ವರ್ಷಗಳ ಬಳಿಕ ಮೊಹ್ಸಿನ್ ಇದೀಗ ನಿಧಾ ಭಟ್ ಎನ್ನುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿವಾಹದ ಫೋಟೋಗಳ ಜೊತೆಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಒಳ್ಳೆಯ ಉದ್ದೇಶಗಳು, ಪ್ರಾಮಾಣಿಕ ಪ್ರೀತಿ, ತಾಳ್ಮೆ ಹಾಗೂ ಕೃತಜ್ಞತೆ ತುಂಬಿದ ಹೃದಯ. ನಿಮ್ಮ ಆತ್ಮವನ್ನು ಶುದ್ಧವಾಗಿಟ್ಟುಕೊಳ್ಳಿ. ಜೀವನದ ಹಾದಿಯಲ್ಲಿ ನೋವುಗಳನ್ನು ಮರೆತು ಸಂತೋಷದಿಂದ ಕೂಡಿರಲು ಅಲ್ಲಾಹುವಿನ ಆಶೀರ್ವಾದ ಬೇಕು. ಇದೀಗ ನಿಧಾ ಭಟ್ ಹಾಗೂ ನನ್ನನ್ನು ಅಲ್ಲಾಹು ಒಂದು ಮಾಡಿದ್ದಾನೆ. ನೀನು ನನ್ನ ಜೀವನದಲ್ಲಿ ಹೊಸ ಬೆಳಕನ್ನು ತಂದಿದ್ದೀಯಾ. ನಿನಗೆ ಧನ್ಯವಾದಗಳು ಮೈ ಲವ್ ಎಂದು ಬರೆದುಕೊಂಡಿದ್ದಾರೆ.
ನನ್ನನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿರುವ ನನ್ನ ತಾಯಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ನಿಮ್ಮ ಆಶೀರ್ವಾದ ಮತ್ತು ಪ್ರೀತಿ ನನ್ನ ಮೇಲೆ ಸದಾ ಇರಲಿ. ನನ್ನ ಈ ಮದುವೆಯಿಂದ ನಿಮಗೆ ಇನ್ನಷ್ಟು ನೆಮ್ಮದಿ ಸಿಕ್ಕಿದೆ. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಊರ್ಮಿಳಾ ಮತ್ತು ಮೊಹ್ಸಿನ್ 2016ರ ಫೆಬ್ರವರಿ 4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಗ ಇವರಿಬ್ಬರ ವಿವಾಹ ಸಾಕಷ್ಟು ಸದ್ದು ಮಾಡಿತ್ತು. ಏಕೆಂದರೆ ಮೊಹ್ಸಿನ್ ಊರ್ಮಿಳಾ ಅವರಿಗಿಂತ 10 ವರ್ಷ ಚಿಕ್ಕವರಾಗಿದ್ದರು. ಅಷ್ಟೇ ಅಲ್ಲದೇ, ಇಬ್ಬರೂ ಕೂಡ ಬೇರೆ ಬೇರೆ ಧರ್ಮದವರಾಗಿದ್ದ ಕಾರಣ ಇವರಿಬ್ಬರ ಮದುವೆ ವಿಷಯ ಸಾರ್ವಜನಿಕವಾಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ 2024 ರಲ್ಲಿ ದಂಪತಿಯ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತ್ತು. ಅದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಊರ್ಮಿಳಾ ಅವರು ವಿಚ್ಛೇದನಕ್ಕಾಗಿ ಮುಂಬೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಊರ್ಮಿಳಾ ಅವರು ಬಾಲಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿ ಕಲಿಯುಗ್ ಮತ್ತು ಮಾಸೂಮ್ ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ 1991ರಲ್ಲಿ ನರಸಿಂಹ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅದಾದ ಬಳಿಕ ಅವರು ಬಾಲಿವುಡ್ನ ರಂಗೀಲಾ, ಜುದಾಯಿ, ಸತ್ಯಾ, ಕೌನ್, ಪ್ಯಾರ್ ತೊನೆ ಕ್ಯಾ ಕಿಯಾ, ಭೂತ್ ಮತ್ತು ಏಕ್ ಹಸೀನಾ ಥಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.