ಬೆಂಗಳೂರು, ಜೂ. 17 (DaijiworldNews/TA): ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ, ಇದೀಗ ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ, ಶರ್ಮಿಳಾ ಮತ್ತು ಸುಧನ್ ಅವರ ನಿಶ್ಚಿತಾರ್ಥ ಇದೇ ತಿಂಗಳ 25ರಂದು ಆಪ್ತ ಬಂಧುಗಳು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ. ಈ ವರ್ಷದಲ್ಲೇ ಮದುವೆ ಸಮಾರಂಭವೂ ನೆರವೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸುಧನ್ ಸುಂದರಂ ತಮಿಳು ಚಿತ್ರರಂಗದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅವರು ‘ಪ್ಯಾಷನ್ ಸ್ಟುಡಿಯೋಸ್’ ನಿರ್ಮಾಣ ಸಂಸ್ಥೆಯ ಮೂಲಕ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಭಾರೀ ಯಶಸ್ಸು ಕಂಡ ‘ಮಹಾರಾಜ’ ಚಿತ್ರದ ನಿರ್ಮಾಪಕರಾಗಿದ್ದ ಸುಧನ್, ‘ತಾಕ್ ಕಿಳವಿ’, ‘ಇರೈವನ್’, ‘ಬೆಂಜ್’ ಸೇರಿದಂತೆ ಹಲವು ಚಿತ್ರಗಳ ನಿರ್ಮಾಣದಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ.
ಚಿತ್ರ ನಿರ್ಮಾಣದ ಜೊತೆಗೆ ವಿತರಣಾ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ಸುಧನ್, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 2007ರಲ್ಲಿ ಬಿಡುಗಡೆಯಾದ ‘ಸಜನಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶರ್ಮಿಳಾ ಮಾಂಡ್ರೆ, ಬಳಿಕ ಹಲವು ಯಶಸ್ವಿ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.
ನಟನೆಯ ಜೊತೆಗೆ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಅವರು, ಹಲವು ಯೋಜನೆಗಳಲ್ಲಿ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಕನ್ನಡದ ‘ದಸರಾ’ ಹಾಗೂ ತಮಿಳಿನ ‘ಅದೃಷ್ಟಶಾಲಿ’ ಚಿತ್ರಗಳಲ್ಲಿ ನಟಿಸುತ್ತಿದ್ದು, ‘ದಸರಾ’ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರ ಜೊತೆಗೆ ‘ಕಾದಲ್ ಕೊಂಜಂ ತೂಕಲಾ’ ಎಂಬ ತಮಿಳು ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ.
ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಸ್ಯಾಂಡಲ್ವುಡ್ನ ಜನಪ್ರಿಯ ನಟಿ ಇದೀಗ ಕಾಲಿವುಡ್ನ ಖ್ಯಾತ ನಿರ್ಮಾಪಕರ ಮನೆಗೆ ಸೊಸೆಯಾಗಲಿರುವುದು ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಶೀಘ್ರದಲ್ಲೇ ನಿಶ್ಚಿತಾರ್ಥ ಹಾಗೂ ಮದುವೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಕುಟುಂಬದವರು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.