ಮುಂಬೈ, ಜು. 05 (DaijiworldNews/AA): ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಬಾಲಿವುಡ್ ನಟ ಆಮಿರ್ ಖಾನ್ ಹಾಗೂ ಬೆಂಗಳೂರಿನ ಗೌರಿ ಸ್ಪ್ರ್ಯಾಟ್ ಅವರು ಇಂದು ಮುಂಬೈನ ಬಾಂದ್ರಾದಲ್ಲಿರುವ ನಟನ ನಿವಾಸದಲ್ಲಿ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

ಮದುವೆಯಲ್ಲಿ ಸುಮಾರು 150 ಮಂದಿ ಮಾತ್ರ ಭಾಗಿಯಾಗಿದ್ದರು. ವಿದೇಶಗಳಿಂದ ಬಂದ ಕೆಲ ಬಂಧುಗಳು, ಆಪ್ತ ಸ್ನೇಹಿತರು ಹಾಗೂ ಸಿನಿಮಾ ಕ್ಷೇತ್ರದ ಆಯ್ದ ಗಣ್ಯರು ಮದುವೆಯಲ್ಲಿ ಉಪಸ್ಥಿತರಿದ್ದರು. ಮದುವೆಯ ಬಳಿಕ ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ವಿವಾಹ ನೋಂದಣಿಗೆ ಅಗತ್ಯ ದಾಖಲೆಗಳಿಗೆ ಸಹಿ ಹಾಕಿ ತಮ್ಮ ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡಿದ್ದಾರೆ.
ಈ ಮದುವೆಯಲ್ಲಿ ಆಮಿರ್ ಖಾನ್ ಅವರ ಮೂವರು ಮಕ್ಕಳಾದ ಜುನೈದ್, ಇರಾ, ಆಜಾದ್ ಹಾಗೂ ಗೌರಿ ಸ್ಪ್ರ್ಯಾಟ್ ಅವರ ಆರು ವರ್ಷದ ಮಗ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು. 25 ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿರುವ ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಇವರಿಬ್ಬರು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.