ಮುಂಬೈ, ಜು. 07 (DaijiworldNews/AA): ಬಹುಭಾಷಾ ನಟ ಕಮಲ್ ಹಾಸನ್ ಸ್ವಪ್ರತಿಷ್ಠೆ ಉಳ್ಳ ವ್ಯಕ್ತಿ, ಗರ್ವಿ. ಅವರಿಗೆ ಸ್ಟಾರ್ ಡಮ್ ಬಹಳ ಮುಖ್ಯ ಎಂದು ಹಿರಿಯ ನಟ ಯತಿನ್ ಕರ್ಯೇಕರ್ ಆರೋಪ ಮಾಡಿದ್ದಾರೆ.

ಸಂಜಯ್ ದತ್ ಅವರ 'ಮುನ್ನಾ ಬಾಯ್ ಎಂಬಿಬಿಎಸ್' ಚಿತ್ರದ ತಮಿಳು ರೀಮೇಕ್ 'ವಸೂಲ್ ರಾಜಾ ಎಂಬಿಬಿಎಸ್' ಚಿತ್ರದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡ ಅವರು, "ನಾವು 'ವಸೂಲ್ ರಾಜಾ ಎಂಬಿಬಿಎಸ್' ಚಿತ್ರದ ಶೂಟಿಂಗ್ನಲ್ಲಿದ್ದಾಗ, ಹಿಂದಿ ಆವೃತ್ತಿಯಲ್ಲಿ ಜಿಮ್ಮಿ ಶೆರ್ಗಿಲ್ ಅವರು ಸಂಜಯ್ ದತ್ ಅವರಿಗೆ ಕಪಾಳಕ್ಕೆ ಹೊಡೆಯುವ ದೃಶ್ಯವಿದೆ. ಆದರೆ, ತಮಿಳು ರೀಮೇಕ್ನಲ್ಲಿ ಕಮಲ್ ಹಾಸನ್ ಆ ದೃಶ್ಯವನ್ನು ಚಿತ್ರೀಕರಿಸಲು ಬಿಡಲಿಲ್ಲ, ಕಪಾಳಕ್ಕೆ ಹೊಡೆಯುವ ಬದಲಾಗಿ ಅದನ್ನು ತಳ್ಳುವ ದೃಶ್ಯವಾಗಿ ಬದಲಾಯಿಸಿದರು. ಅವರು ತಮ್ಮ ಪಾತ್ರ ಹಾಗೂ ತಮ್ಮ ಪಾತ್ರದಲ್ಲಿ ತಾವು ದುರ್ಬಲವಾಗಿ ಕಾಣಬಾರದೆಂದು ಹಲವು ಬಾರಿ ದೃಶ್ಯಗಳನ್ನು ತಮ್ಮದೇ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಿದ್ದರು" ಎಂದಿದ್ದಾರೆ.
"ಸAಜಯ್ ದತ್ ಅವರೇ ಆ ದೃಶ್ಯವನ್ನು ಯಾವುದೇ ಹಿಂಜರಿಕೆ ಇಲ್ಲದೆ ಮಾಡಿದ್ದಾರೆ, ಹಾಗಿದ್ದ ಮೇಲೆ ಈ ವ್ಯಕ್ತಿಗೆ ಏನು ಸಮಸ್ಯೆ? ಅಲ್ಲದೆ, 'ಮುನ್ನಾ ಬಾಯ್ ಎಂಬಿಬಿಎಸ್' ಚಿತ್ರದಲ್ಲಿ ಸುನಿಲ್ ದತ್ ತಂದೆಯ ಪಾತ್ರಕ್ಕೆ ಇದ್ದ ಗೌರವ, ಅಧಿಕಾರ ಮನೋಭಾವವನ್ನು ಈ ರೀಮೇಕ್ನಲ್ಲಿ ಮರುಸೃಷ್ಟಿಸಲು ಸಾಧ್ಯವಾಗಲಿಲ್ಲ. ಕಮಲ್ ಹಾಸನ್ ಅವರ ತಂದೆಯ ಪಾತ್ರದಲ್ಲಿ ನಟಿಸಿದವರಿಗೆ ಯಾರೂ 'ಏ, ಹೋಗು' ಎಂದು ಹೇಳುವಂತಿರಲಿಲ್ಲ" ಎಂದು ತಿಳಿಸಿದ್ದಾರೆ.
"ಕಮಲ್ ಹಾಸನ್ ವಿವಾದಗಳನ್ನು ಬಳಸಿಕೊಳ್ಳುವ ಹವ್ಯಾಸ ಹೊಂದಿದ್ದರು. ವಿವಾದಗಳಿಂದ ಅವರಿಗೆ ಮತ್ತು ಅವರ ಚಿತ್ರಗಳಿಗೆ ಪ್ರಚಾರ ಸಿಗಲು ಸಹಾಯ ಮಾಡುತ್ತಿತ್ತು. 'ಹೇ ರಾಮ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ವಿಮಾನ ತಡವಾದಾಗ ಅವರು ವಿಮಾನದ ಮುಂದೆ ಕುಳಿತು ಪ್ರತಿಭಟಿಸಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.