ಬೆಂಗಳೂರು, ಜು. 23 (DaijiworldNews/AK): ರಾಜ್ ಬಿ. ಶೆಟ್ಟಿ ಹೀರೋ ಆಗಿ ಮಿಂಚುವುದರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಕೂಡ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಹಿಂದಿಯ ‘ಬಂದರ್’ ಸಿನಿಮಾದಲ್ಲಿ ರಾಜ್ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ‘ಕರಾವಳಿ’ ಸಿನಿಮಾದಲ್ಲೂ ಅವರು ಅತಿಥಿ ಪಾತ್ರ ಮಾಡಿದ್ದಾರೆ.

ಇದರ ಸುತ್ತ ವಿವಾದ ಎದ್ದಿದ್ದು, ಇದು ಅವರಿಗೆ ಬೇಸರ ತರಿಸಿದೆ. ನಾನು ಅತಿಥಿ ಪಾತ್ರ ಮಾಡುತ್ತೇನೆ ಎಂಬುದು ಮುಖ್ಯವಲ್ಲ. ನಾನು ಯಾವಾಗಲೂ ಒಬ್ಬ ತಂತ್ರಜ್ಞನಾಗಿ ಯೋಚಿಸುತ್ತೇನೆ. ಎಲ್ಲರೂ ಕಥಾನಾಯಕರಾಗಲು ಸಾಧ್ಯವಿಲ್ಲ, ಯಾರಾದರೂ ಇತರ ಪಾತ್ರಗಳನ್ನೂ ಮಾಡಬೇಕಾಗುತ್ತದೆ. ಕರಾವಳಿ ಸಿನಿಮಾ ಒಬ್ಬ ವ್ಯಕ್ತಿ ಅಥವಾ ಒಂದು ಪಾತ್ರದ ಬಗ್ಗೆ ಅಲ್ಲ, ಇದು ಆ ಮಣ್ಣಿನ ಕಥೆ’ ಎಂದು ಅವರು ಹೇಳಿದ್ದಾರೆ.
ರಾಜ್ ಬಿ ಶೆಟ್ಟಿ ಅವರಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿ ಆಗಿದೆ. ಹೀಗಾಗಿ, ‘ಕರಾವಳಿ’ ಸಿನಿಮಾದಲ್ಲಿ ಅವರ ಪಾತ್ರ ಹೈಲೈಟ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂತು. ಈ ಘಟನೆಗಳು ಅವರ ಮನಸ್ಸಿಗೆ ತೀವ್ರ ಬೇಸರ ತಂದಿವೆ.
ಈ ಸಿನಿಮಾದಲ್ಲಿ ನನ್ನ ಅತಿಥಿ ಪಾತ್ರದ ಸುತ್ತ ಎದ್ದಿರುವವಿವಾದಗಳು ಹಾಗೂ ಇತ್ತೀಚಿನ ಇತರ ಘಟನೆಗಳನ್ನು ನೋಡಿದರೆ, ಭವಿಷ್ಯದಲ್ಲಿ ನಾನು ಮತ್ತೆ ಅತಿಥಿ ಪಾತ್ರಗಳನ್ನು ಮಾಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ನಾನು ‘ರಕ್ಕಸಪುರದೋಳ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾಗಲೂ, ಚೊಚ್ಚಲ ನಟ ಅನಿರುದ್ಧ್ ಭಟ್ ಮಾಡಿದ್ದ ವಿಲನ್ ಪಾತ್ರವೇ ಚಿತ್ರದ ಹೈಲೈಟ್ ಆಗಿತ್ತು. ಅದಕ್ಕೆ ನಾನು ಎಂದಿಗೂ ತಲೆಕೆಡಿಸಿಕೊಂಡಿಲ್ಲ. ಅಭದ್ರತೆ ನನಗೆ ಕಾಡಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ ಎಂಬುದು ನನಗೆ ಗೊತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಘಟನೆಗಳು ನಾನು ಅತಿಥಿ ಪಾತ್ರಗಳನ್ನು ಒಪ್ಪಿಕೊಳ್ಳುವ ಮುನ್ನ ಮರುಚಿಂತನೆ ನಡೆಸುವಂತೆ ಮಾಡಿವೆ’ ಎಂದು ನೇರವಾಗಿ ಹೇಳಿದ್ದಾರೆ.