ಬೆಂಗಳೂರು, ಜು. 27 (DaijiworldNews/AK): ‘ಕಾಂತಾರ’ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಜಾಗತಿಕ ಮಟ್ಟದ ಅತಿದೊಡ್ಡ ಸೂಪರ್ ಹೀರೋ ಫ್ರಾಂಚೈಸಿ ಸ್ಪೈಡರ್ ಮ್ಯಾನ್ ಪ್ರಪಂಚಕ್ಕೆ ಕಾಲಿಡುವ ಮೂಲಕ ಕನ್ನಡ ಹಾಗೂ ಭಾರತೀಯ ಚಿತ್ರರಂಗ ಹೆಮ್ಮೆಪಡುವಂತೆ ಮಾಡಿದ್ದಾರೆ.

ಹಾಲಿವುಡ್ ದೈತ್ಯ ಸಂಸ್ಥೆ ಸೋನಿ ಪಿಕ್ಚರ್ಸ್ ಮುಂಬರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ವಿಶೇಷ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಅವರೊಂದಿಗೆ ಕೈಜೋಡಿಸಿದೆ. ಈ ಮೂಲಕ ಇಂತಹ ಬೃಹತ್ ಹಾಲಿವುಡ್ ಚಿತ್ರವೊಂದರ ಪ್ರಚಾರದ ಪ್ರಮುಖ ಭಾಗವಾಗಿ ಆಯ್ಕೆಯಾದ ಭಾರತದ ಮೊದಲ ನಟ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ರಿಷಬ್ ಪಾತ್ರರಾಗಿದ್ದಾರೆ.
ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರಚಾರದ ಪ್ರೋಮೋವನ್ನು ಹಂಚಿಕೊಂಡಿದೆ. “ರಿಷಬ್ ಶೆಟ್ಟಿ ಪೀಟರ್ ಪಾರ್ಕರ್ ಪ್ರಪಂಚಕ್ಕೆ ಪ್ರವೇಶಿಸುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ…” ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಅಂತ್ಯದಲ್ಲಿ ಪೀಟರ್ ಪಾರ್ಕರ್ ತನ್ನ ನೆನಪನ್ನು ಜಗತ್ತೇ ಮರೆಯುವಂತೆ ಮಾಡುವ ಸನ್ನಿವೇಶ, ಆತನ ಒಂಟಿತನ ಮತ್ತು ‘ಸೂಪರ್-ಹೀರೋಯಿಸಂ’ ಪರಿಕಲ್ಪನೆಯನ್ನು ರಿಷಭ್ ಶೆಟ್ಟಿ ಈ ಪ್ರೋಮೋದಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ.