ಮುಂಬೈ, ಜು. 29 (DaijiworldNews/AA): ಬಾಲಿವುಡ್ನ ಖ್ಯಾತ ರ್ಯಾಪರ್ ಹಾಗೂ ಜನಪ್ರಿಯ ಗಾಯಕ ಬಾದ್ಶಾ ಹಾಗೂ ಎರಡನೇ ಪತ್ನಿ ಇಶಾ ರಿಖಿ ನಡುವೆ ಬಿರುಕು ಮೂಡಿದ್ದು, ಶೀಘ್ರದಲ್ಲೇ ಈ ಜೋಡಿ ವಿಚ್ಛೇದನ ಪಡೆಯಲಿದೆ ಎಂದು ಹೇಳಲಾಗುತ್ತಿದೆ.

ಬಾದ್ಶಾ ಪತ್ನಿ ಇಶಾ ರಿಖಿ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಸಿನಿಮಾ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. 'ಕಣ್ಣಿಗೆ ಕಾಣಿಸುವಂತಹ ಯಾವುದೇ ಗಾಯದ ಗುರುತುಗಳನ್ನು ಬಿಡದ ಕೆಲವು ಹೋರಾಟಗಳಿರುತ್ತವೆ. ದೀರ್ಘಕಾಲದವರೆಗೆ ನಾನು ಭಯದಿಂದಾಗಿ ಮೌನವಾಗಿದ್ದೆ. ನನ್ನ ಪತಿಗೆ ಇದೆ ಎಂದು ನಾನು ನಂಬಿದ್ದ ಪ್ರಭಾವ, ಅಧಿಕಾರ ಕಂಡು ನಾನು ಧೃತಿಗೆಟ್ಟಿದ್ದೆ, ಹಾಗೂ ಸುಮ್ಮನಿರುವುದೇ ಎಲ್ಲಕ್ಕಿಂತ ಸುರಕ್ಷಿತವಾದ ಮಾರ್ಗ ಎಂದು ನನ್ನ ಮನಸ್ಸಿಗೆ ನಾನೇ ಒಪ್ಪಿಸಿಕೊಂಡಿದ್ದೆ' ಎಂದು ಇಶಾ ಪೋಸ್ಟ್ ಮಾಡಿದ್ದಾರೆ.
'ಮೌನ ಎನ್ನುವುದು ಎಂದಿಗೂ ಒಪ್ಪಿಗೆಯಾಗಿರಲಿಲ್ಲ. ಅದು ಕೇವಲ ಬದುಕಿ ಉಳಿಯುವ ಪ್ರಯತ್ನವಾಗಿತ್ತು. ಇಂದು, ನಾನು ಭಯದ ಬದಲು ಧೈರ್ಯವನ್ನು ಆರಿಸಿಕೊಳ್ಳುತ್ತಿದ್ದೇನೆ. ಸಂಪೂರ್ಣ ಕಥೆಯನ್ನು ಹೇಳಲು ನಾನು ಇನ್ನೂ ಸಿದ್ಧಳಾಗಿಲ್ಲದಿರಬಹುದು, ಆದರೆ ಎಲ್ಲವೂ ಸರಿಯಾಗಿದೆ ಎಂದು ನಟಿಸುವುದನ್ನು ನಿಲ್ಲಿಸಲು ಕೊನೆಗೂ ನಾನು ಸಿದ್ಧಳಾಗಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಬಾದ್ಶಾ ಅವರು ಜಾಸ್ಮಿನ್ ಮಸಿಹ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 2020 ರಲ್ಲಿ ಈ ಜೋಡಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ಬಳಿಕ 2026ರ ಮಾರ್ಚ್ ತಿಂಗಳಲ್ಲಿ ಇಶಾ ರಿಖಿ ಅವರನ್ನು ಬಾದ್ಶಾ ಸರಳವಾಗಿ ವಿವಾಹವಾಗಿದ್ದರು. ಆದರೆ ಇದೀಗ ಮದುವೆಯಾದ ನಾಲ್ಕೇ ತಿಂಗಳಿಗೆ ಈ ಜೋಡಿ ಮಧ್ಯೆ ಬಿರುಕು ಕಾಣಿಸಿಕೊಂಡಿದೆ.