ಬೆಂಗಳೂರು, ಜು. 30 (DaijiworldNews/AK):ಸ್ಯಾಂಡಲ್ವುಡ್ನ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಸದ್ದಿಲ್ಲದೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮಂಡ್ಯ ಮೂಲದ ಪಾವನಾ ಅವರನ್ನು ಚಿಕ್ಕಣ್ಣ ಕೈಹಿಡಿಯಲಿದ್ದಾರೆ. ಮದುವೆ ದಿನಾಂಕವೂ ನಿಗದಿಯಾಗಿದೆ.

ಆಗಸ್ಟ್ 29 ಮತ್ತು 30 ರಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್ನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ. ಈ ಮದುವೆ ಮಹೋತ್ಸವದಲ್ಲಿ ಸ್ಯಾಂಡಲ್ವುಡ್ನ ಪ್ರಮುಖ ನಟ-ನಟಿಯರು, ತಂತ್ರಜ್ಞರು ಹಾಗೂ ಗಣ್ಯರು ಭಾಗವಹಿಸುವ ಸಾಧ್ಯತೆಯಿದೆ.
ಚಿಕ್ಕಣ್ಣ ಅವರ ವಧು ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು. ಇಂಜಿನಿಯರಿಂಗ್ ಪದವಿ ಪಡೆದಿರುವ ಪಾವನಾ ಅವರೊಂದಿಗೆ ಚಿಕ್ಕಣ್ಣ ಹೊಸ ಜೀವನ ಆರಂಭಿಸಲಿದ್ದು ಆಗಸ್ಟ್ 2025 ರಲ್ಲಿ ಮದುವೆ ನಿಶ್ಚಯವಾಗಿತ್ತು.
ಮೈಸೂರಿನ ಬಲ್ಲಹಳ್ಳಿಯಲ್ಲಿ ಜನಿಸಿದ ಚಿಕ್ಕಣ್ಣ ಅವರ ಜೀವನ ಪಯಣ ಅತ್ಯಂತ ಸ್ಪೂರ್ತಿದಾಯಕವಾಗಿದೆ. ಎಸ್ಎಸ್ಎಲ್ಸಿ ಶಿಕ್ಷಣದ ನಂತರ ಜೀವನೋಪಾಯಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಅವರಿಗೆ, ಶಾಲಾ ದಿನಗಳಿಂದಲೇ ನಾಟಕಗಳಲ್ಲಿ ನಟಿಸುವ ಹವ್ಯಾಸವಿತ್ತು. ಆರ್ಕೆಸ್ಟ್ರಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಕಿರುತೆರೆಗೆ ಪ್ರವೇಶಿಸಿದ ಇವರು, ನಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
ನಟ ಯಶ್ ಅಭಿನಯದ ‘ಕಿರಾತಕ’ ಸಿನಿಮಾ ಚಿಕ್ಕಣ್ಣ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಅಲ್ಲಿಂದ ಹಿಂತಿರುಗಿ ನೋಡದ ಚಿಕ್ಕಣ್ಣ, ಕನ್ನಡದ ಬಹುತೇಕ ಎಲ್ಲಾ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರ ನೆಚ್ಚಿನ ನಟನಾಗಿ ಹೊರಹೊಮ್ಮಿದ್ದಾರೆ.