ಮುಂಬೈ, ಆ. 02 (DaijiworldNews/AA): ಅನಗತ್ಯವಾಗಿ ಕಮೆಂಟ್ ಮಾಡುವುದು ನಿಲ್ಲಿಸಿ. ಅದರ ಬದಲು, ನನಗೆ ಕಿರುಕುಳ ನೀಡುತ್ತಿರುವವರನ್ನು ಖಂಡಿಸಿ ಎಂದು ಇನ್ಸ್ಟಾಗ್ರಾಮ್ನಲ್ಲಿ ಹೃತಿಕ್ ರೋಷನ್ ಮಾಡಿದ ಕಾಮೆಂಟ್ ಒಂದಕ್ಕೆ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ವಾಗ್ದಾಳಿ ನಡೆಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಇತ್ತೀಚೆಗೆ ಕಂಗನಾ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ 'ನಾವು ಹೃತಿಕ್ ರೋಷನ್ ಬಳಿ ಕ್ಷಮೆ ಕೇಳಬೇಕು' ಎನ್ನುವ ಪೋಸ್ಟ್ ಒಂದು ವೈರಲ್ ಆಗಿತ್ತು. ಈ ಪೋಸ್ಟ್ಗೆ 'ಒಬ್ಬ ವ್ಯಕ್ತಿಯನ್ನು ದ್ವೇಷಿಸುವ ಕಾರಣಕ್ಕೆ ಇನ್ನೊಬ್ಬರ ಪರ ವಹಿಸುವುದು ಸರಿಯಲ್ಲ. ನಾನು ಸೂಕ್ತ ಸಂದರ್ಭ ಮತ್ತು ಸತ್ಯಾಸತ್ಯತೆ ತಿಳಿಯುವವರೆಗೆ ಕಾಯುತ್ತೇನೆ' ಎಂದು ಹೃತಿಕ್ ರೋಷನ್ ಕಾಮೆಂಟ್ ಮಾಡಿದ್ದರು.
ಹೃತಿಕ್ ಅವರ ಈ ಕಾಮೆಂಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಕಂಗನಾ ರಣಾವತ್, "ಪ್ರಿಯ ಹೃತಿಕ್, ನಿಮಗೆ ಸಾಬಾ ಆಜಾದ್ ರೂಪದಲ್ಲಿ ಸೂಕ್ತ ಸಂಗಾತಿ ಸಿಕ್ಕಿರುವುದಕ್ಕೆ ನನಗೆ ಸಂತೋಷವಿದೆ. ನೀವಿಬ್ಬರೂ ಒಟ್ಟಿಗೆ ಚೆನ್ನಾಗಿ ಕಾಣಿಸುತ್ತೀರಿ. ಈಗ ನೀವು ಅವರ ಜೊತೆ ರಿಲೇಷನ್ಶಿಪ್ನಲ್ಲಿ ಇದ್ದೀರಿ. ಹೀಗಿರುವಾಗ ಮತ್ತೊಬ್ಬ ಮಹಿಳೆಯನ್ನು ಈ ರೀತಿ ಕೆಣಕುವುದು ನಿಮಗೆ ಶೋಭೆ ತರುವುದಿಲ್ಲ" ಎಂದು ಕಿಡಿಕಾರಿದ್ದಾರೆ.
"ನಿಮ್ಮ ಹೆಸರನ್ನು ಬಳಸಿಕೊಂಡು ನನ್ನನ್ನು ಪೀಡಿಸುತ್ತಿರುವ ಮತ್ತು ಕಿರುಕುಳು ನೀಡುತ್ತಿರುವ ಆನ್ಲೈನ್ ಟ್ರೋಲರ್ಗಳನ್ನು ನೀವು ಖಂಡಿಸಬೇಕು. ಬೆಂಕಿಗೆ ತುಪ್ಪ ಸುರಿಯುವುದನ್ನು ನಿಲ್ಲಿಸಿ ಹಾಗೂ ನಿಮ್ಮ ಸಂಗಾತಿಗೆ ಮುಜುಗರ ತರಬೇಡಿ. ನಿಮಗೆ ಇನ್ನಾದರೂ ಬುದ್ಧಿ ಬರಲಿ. ಅನಗತ್ಯವಾಗಿ ಕಮೆಂಟ್ ಮಾಡುವುದು ನಿಲ್ಲಿಸಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.