ಮುಂಬೈ, ಆ. 03 (DaijiworldNews/AA): ಗಾಯಕರ ರಾಯಲ್ಟಿ ಮತ್ತು ಕೃತಿಸ್ವಾಮ್ಯದ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಕ್ಕೆ ಎರಡು ದೊಡ್ಡ ಮ್ಯೂಸಿಕ್ ಕಂಪನಿಗಳು ತಮಗೆ ಬಹಿಷ್ಕಾರ ಹಾಕಿದ್ದವು ಎಂದು ಭಾರತೀಯ ಚಿತ್ರರಂಗದ ಅದ್ಭುತ ಗಾಯಕ ಸೋನು ನಿಗಮ್ ಬಹಿರಂಗಪಡಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ತಾವು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಈ ಘಟನೆ ನಡೆದಿತ್ತು. ಕೃತಿಸ್ವಾಮ್ಯದ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ ಎರಡು ದೊಡ್ಡ ಮ್ಯೂಸಿಕ್ ಸಂಸ್ಥೆಗಳು ತಮಗೆ ಬಹಿಷ್ಕಾರ ಹಾಕಿತ್ತು. ಜೊತೆಗೆ ತಮ್ಮೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಅವರು ನನ್ನನ್ನು ಒಬ್ಬ ಹೋರಾಟಗಾರ ಎಂದು ಕರೆಯುತ್ತಿದ್ದರು. ಗಾಯಕಿ ಲತಾ ಮಂಗೇಶ್ಕರ್ ಅವರು ಆರಂಭಿಸಿದ್ದ ಹೋರಾಟವನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ದೇವರು ತಮಗೆ ನೀಡಿದ್ದನು" ಎಂದು ತಿಳಿಸಿದ್ದಾರೆ.
ಕಲಾವಿದರಿಗೆ ಸೂಕ್ತ ಸಂಭಾವನೆ ಮತ್ತು ಹಕ್ಕುಗಳ ರಕ್ಷಣೆ ಸಿಗಬೇಕು ಎಂದು ಹೋರಾಟ ಮಾಡಲಾಗಿತ್ತು. ಈ ಹೋರಾಟದ ದಿನಗಳಲ್ಲಿ ಅವರು ಹಾಡಿದ ಹಾಡುಗಳನ್ನು ಬೇರೆ ಗಾಯಕರ ಧ್ವನಿಗೆ ಬದಲಾಯಿಸಲಾಗಿತ್ತು. ಒಪ್ಪಂದಗಳಿಗೆ ಸಹಿ ಹಾಕದ ಕಾರಣಕ್ಕೆ ಈ ರೀತಿ ಮಾಡಲಾಗಿತ್ತು.
ಅಂತಿಮವಾಗಿ ಇವರ ಹೋರಾಟಕ್ಕೆ ಜಯ ಸಿಕ್ಕಿದೆ. ಭಾರತದಲ್ಲಿ 2012ರಲ್ಲಿ ಕೃತಿಸ್ವಾಮ್ಯ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಇದಾದ ನಂತರ ಎಲ್ಲ ಕಂಪನಿಗಳೊಂದಿಗೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಂದು ಬಹಿಷ್ಕಾರ ಹಾಕಿದ್ದ ಮ್ಯೂಸಿಕ್ ಕಂಪನಿಗಳೇ ಗಾಯಕರಿಗೆ ರಾಯಲ್ಟಿ ನೀಡುತ್ತಿವೆ.