ಬೆಂಗಳೂರು,ಆ. 08 (DaijiworldNews/AK): ನಾನು ಮತ್ತು ಈ ‘ಟಾಕ್ಸಿಕ್’ ಸಿನಿಮಾ ಇಂದು ಈ ಹಂತಕ್ಕೆ ಬಂದಿರುವುದಕ್ಕೆ ಕರ್ನಾಟಕದ ಜನ ಕಾರಣ. ‘ಟಾಕ್ಸಿಕ್’ ಸಿನಿಮಾದ ನಿರ್ಮಾಣಕ್ಕೆ ನೇರ ಕಾರಣವೇ ಅವರು. ನಾನು ಪ್ರತಿ ಬಾರಿ ಸಿನಿಮಾ ಮಾಡಿದಾಗಲೂ ನನ್ನ ಬೆನ್ನು ತಟ್ಟಿ, ಯಶಸ್ಸು ನೀಡಿದಾಗೆಲ್ಲ, ನಾನು ಇನ್ನೂ ಒಳ್ಳೆಯ ಸಿನಿಮಾ ಮಾಡಬೇಕು ಎಂದು ಮುನ್ನಡೆಯುತ್ತಿದ್ದೆ. ಹಾಗೆಯೇ ಮುನ್ನಡೆದು ಈಗ ‘ಟಾಕ್ಸಿಕ್’ ವರೆಗೂ ಬಂದಿದ್ದೀನಿ. ಇದು ನನ್ನ ಹೊಸ ಸಿನಿಮಾ ಆದರೆ ನನ್ನ ಈ ಹಿಂದಿನ ಸಿನಿಮಾಗಳಿಗೆ ನೀವು ನೀಡಿರುವ ಪ್ರೀತಿ’ ಎಂದು ನಟ ಯಶ್ ಹೇಳಿದರು.

ಬೆಂಗಳೂರಿನ ಎಎಂಬಿ ಮಾಲ್ನಲ್ಲಿ ಇಂದು ಆಗಸ್ಟ್ 08 ನಡೆದ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿನಿಮಾ ತಂಡದ ಬಗ್ಗೆ, ತಂತ್ರಜ್ಞರ ಬಗ್ಗೆ ಹಾಗೂ ಒಟ್ಟಾರೆ ಸಿನಿಮಾ ಮಾಡುವಾಗ ಎದುರಿಸಿದ ಸಮಸ್ಯೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಯಶ್ ಮಾತನಾಡಿದರು.
ನಿಮ್ಮ ಆಶೀರ್ವಾದ ಇರಲಿ, ಯಶ್ ಮೇಲೆ ನಂಬಿಕೆ ಇರಲಿ. ನಿಮ್ಮ ತಲೆ ತಗ್ಗಿಸೋಕೆ ಬಿಡಲ್ಲ. ಹೆಮ್ಮೆಯಿಂದ ಸಿನಿಮಾ ನೋಡಿ. ಹೆಮ್ಮೆಯಿಂದ ನೋಡುವಂಥಹ ಸಿನಿಮಾ ಮಾಡಿದ್ದೀವಿ ಎಂದ ಯಶ್, ಇಷ್ಟೋಂದು ಕಲಾವಿದರು ಈ ಸಿನಿಮಾಕ್ಕೆ ಒಂದಾಗಿದ್ದಾರೆ. ಇವರೆಲ್ಲ ಒಂದಾಗಿರುವುದು ಭಾರತೀಯ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು. ನಾವು ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಸಿನಿಮಾ ಶೂಟ್ ಮಾಡಿದ್ದೇವೆ, ನಾನು ಹಳ್ಳಿಯವನು, ನನ್ನ ಇಂಗ್ಲೀಷ್ ಎಷ್ಟು ಕೆಟ್ಟದಾಗಿತ್ತು ಎಂದು ಎಲ್ಲರಿಗೂ ಗೊತ್ತು, ಆದರೆ ಅಂದುಕೊಂಡರೆ ಸಾಧಿಸಲು ಸಾಧ್ಯ, ಅದನ್ನೇ ಈಗ ಮಾಡಿದ್ದೇವೆ’ ಎಂದರು ಯಶ್.
ದಾರಿ ಯಾವುದಾದರೂ ಆಗಬಹುದು ಗುರಿ ಮುಟ್ಟಬೇಕು, ಹೋರಾಟಕ್ಕೆ ಹೆದರಬಾರದು, ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು. ಯುವಪೀಳಿಗೆಗೆ ಈಗ ಸಾಕಷ್ಟು ಗೊಂದಲಗಳು ಇವೆ, ಅದೆಲ್ಲದರ ಪ್ರತಿನಿಧಿತ್ವ ಈ ಸಿನಿಮಾನಲ್ಲಿ ಇರಲಿದೆ. ಇದು ಸಾಮಾನ್ಯ ಕಮರ್ಶಿಯಲ್ ಸಿನಿಮಾ ಅಲ್ಲ. ಇದು ಮನುಷ್ಯರಿಗೆ ಬೇಕಾದ ಸಿನಿಮಾ, ಮನುಷ್ಯರನ್ನು ಬಾಳ್ವೆಯಲ್ಲಿ ಬೇಕಾದ ಹಲವು ಅಂಶಗಳು ಈ ಸಿನಿಮಾನಲ್ಲಿವೆ ಎಂದರು.