ಮುಂಬೈ, ಆ. 10 (DaijiworldNews/AA): ಭಾರತೀಯನಾಗಿರುವುದು ಅಥವಾ ದೇಶಪ್ರೇಮ ಮೆರೆಯುವುದು ಎಂದಿಗೂ ತಪ್ಪಾಗಲು ಸಾಧ್ಯವಿಲ್ಲ. ಭಾರತದ ಹೆಮ್ಮೆಯ ವಿಷಯಗಳನ್ನು ಎತ್ತಿಹಿಡಿಯುವುದು ಎಂದಿಗೂ ಅಪರಾಧವಾಗುವುದಿಲ್ಲ ಎಂದು ಹಿರಿಯ ನಟ ಹಾಗೂ ನಿರ್ದೇಶಕ ಆರ್. ಮಾಧವನ್ ತಿಳಿಸಿದ್ದಾರೆ.

ಇತ್ತೀಚೆಗೆ ತೆರೆಕಂಡ 'ಧುರಂಧರ್' ಹಾಗೂ ಅವರ ನಿರ್ದೇಶನದ 'ರಾಕೆಟ್ರಿ' ಸಿನಿಮಾಗಳ ವಿರುದ್ಧ ಪ್ರೊಪಗಾಂಡಾ ಅಥವಾ ರಾಜಕೀಯ ಪ್ರಚಾರದ ಆರೋಪಗಳು ಕೇಳಿಬಂದಿದ್ದವು. ಈ ವಿಚಾರವಾಗಿ ಮಾತನಾಡಿದ ಅವರು, "ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬಾಲ್ಯದ ವಾತಾವರಣದಿಂದ ರೂಪುಗೊಳ್ಳುತ್ತಾನೆ. ಚಿಕ್ಕಂದಿನಿಂದಲೂ ನನಗೆ ದೇಶದ ಹಿತವೇ ಮುಖ್ಯ ಎಂಬುದನ್ನು ಕಲಿಸಲಾಗಿದೆ. ದೇಶಕ್ಕಾಗಿ ನಾವು ಮಾಡುವ ಕೆಲಸಗಳು ಬಹಳ ಮುಖ್ಯವಾಗಿವೆ. ನಾನು ಎಂದಿಗೂ ಯಾವುದೇ ರಾಜಕೀಯ ಪಕ್ಷದ ವಿರುದ್ಧ ಮಾತನಾಡಿಲ್ಲ. ಯಾವುದೇ ನಾಯಕರನ್ನು ವೈಯಕ್ತಿಕವಾಗಿ ನಿಂದಿಸುವ ಕೆಲಸ ಮಾಡಿಲ್ಲ. ಒಳ್ಳೆಯ ಕೆಲಸ ಮಾಡಿದಾಗ ಮುಕ್ತವಾಗಿ ಶ್ಲಾಘಿಸುವುದು ನನ್ನ ಅಭ್ಯಾಸ" ಎಂದಿದ್ದಾರೆ.
"ಆಯ್ಕೆಯಾದ ಪ್ರಧಾನಿ ಅಥವಾ ಮುಖ್ಯಮಂತ್ರಿಗೆ ಬೆಂಬಲ ನೀಡುವುದು ನಾಗರಿಕನ ಕರ್ತವ್ಯ. ನಾನು ಎಂದಿಗೂ ಯಾವುದೇ ಪಕ್ಷದ ಪರ ಪ್ರಚಾರ ಮಾಡಿಲ್ಲ. ರಾಜಕೀಯ ಸೇರುವಂತೆ ನನಗೆ ಯಾರೂ ಆಹ್ವಾನ ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬರುವ ನಕಾರಾತ್ಮಕ ಕಮೆಂಟ್ಗಳು ನನ್ನ ಮೇಲೆ ಪ್ರಭಾವ ಬೀರಲ್ಲ. ಅವು ಕೇವಲ ಜನರ ವೈಯಕ್ತಿಕ ಅಸಮಾಧಾನದ ಅಭಿವ್ಯಕ್ತಿಯಷ್ಟೇ. ಕ್ರೀಡಾಪಟುಗಳು ದೇಶಕ್ಕೆ ತರುವ ಕೀರ್ತಿಯನ್ನು ನಾನು ಸಂಭ್ರಮಿಸುತ್ತೇನೆ. ಅದನ್ನೂ ಕೆಲವರು ತಪ್ಪಾಗಿ ನೋಡಿದರೆ ಅವರ ಉದ್ದೇಶವನ್ನೇ ಪ್ರಶ್ನಿಸಬೇಕಾಗುತ್ತದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ದೇಶಪ್ರೇಮವನ್ನು ತೋರುವುದು ಎಂದಿಗೂ ತಪ್ಪಾಗಲು ಸಾಧ್ಯವಿಲ್ಲ. ರಾಕೆಟ್ರಿ ಸಿನಿಮಾದಲ್ಲಿ ನಂಬಿ ನಾರಾಯಣನ್ ಅವರ ನೈಜ ಜೀವನವನ್ನು ತೋರಿಸಿದ್ದೇನೆ. ಅವರು ದೇವರನ್ನು ನಂಬುವ ವ್ಯಕ್ತಿಯಾಗಿದ್ದರು. ಅದನ್ನೇ ಸಿನಿಮಾದಲ್ಲಿ ನೈಜವಾಗಿ ಚಿತ್ರಿಸಲಾಗಿದೆ. ಅದೇ ರೀತಿ ಜಿ.ಡಿ. ನಾಯ್ಡು ಅವರು ದೇವರಿಲ್ಲ ಎನ್ನುವ ಸಿದ್ಧಾಂತ ಹೊಂದಿದ್ದರು. ಪ್ರತಿಯೊಂದು ಪಾತ್ರಕ್ಕೂ ಸತ್ಯಸಂಧವಾಗಿರುವುದು ನಟನ ಜವಾಬ್ದಾರಿಯಾಗಿದೆ. ನಟನಾಗಿ ನೈಜತೆಯನ್ನು ಪ್ರಸ್ತುತಪಡಿಸುವುದು ನನ್ನ ಮುಖ್ಯ ಕೆಲಸ" ಎಂದು ಹೇಳಿದ್ದಾರೆ.
"ಇಂಟರ್ನೆಟ್ನಲ್ಲಿ ಬರುವ ಟ್ರೋಲ್ಗಳನ್ನು ಗುರುತಿಸುವುದು ತುಂಬಾ ಸುಲಭ. ಕಮೆಂಟ್ ಮಾಡುವ ಅಕೌಂಟ್ ಯಾವಾಗ ಶುರುವಾಗಿದೆ ಎಂದು ನೋಡಬೇಕು. ಅವರ ಫಾಲೋವರ್ಸ್ ಸಂಖ್ಯೆಯನ್ನು ಗಮನಿಸಿದರೆ ಸಾಕು. ಇದರಿಂದಲೇ ಅವರು ನಕಲಿಯೋ ಅಥವಾ ಹಣ ಪಡೆದು ಟ್ರೋಲ್ ಮಾಡುವವರೇ ಎಂಬುದು ತಿಳಿಯುತ್ತದೆ" ಎಂದು ನುಡಿದಿದ್ದಾರೆ.