ಬೆಂಗಳೂರು, ಆ. 11 (DaijiworldNews/AA): ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್)ಯ ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರು ಡಿಲೀಟ್ ಆಗಿರುವುದಾಗಿ ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, "ಎಸ್ಐಆರ್ ಕಾರಣಕ್ಕೆ ಬೆಂಗಳೂರಿನಿಂದ ಡಿಲೀಟ್ ಆಗಿರುವ 65 ಲಕ್ಷ ಮತದಾರರಲ್ಲಿ ನಾನೂ ಸಹ ಒಬ್ಬ. ನಾನು ಹುಟ್ಟಿ, ಬೆಳೆದ ಕ್ಷೇತ್ರದಿಂದಲೇ ನನ್ನ ಮತವನ್ನು ತೆಗೆದು ಹಾಕಲಾಗಿದೆ. ನಾನು ಅದೇ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸಹ ಸ್ಪರ್ಧಿಸಿದ್ದೆ. ಆದರೂ ಸಹ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದು ಜೋಕ್ ಅಲ್ಲದೆ ಮತ್ತೇನು?" ಎಂದು ತಿಳಿಸಿದ್ದಾರೆ.
2019ರಲ್ಲಿಯೇ ಪ್ರಕಾಶ್ ರೈ ವಿರುದ್ಧ, ಒಂದಕ್ಕಿಂತಲೂ ಹೆಚ್ಚು ಕ್ಷೇತ್ರದಲ್ಲಿ ಮತದಾನದ ಹಕ್ಕನ್ನು ಹೊಂದಿರುವುದಕ್ಕೆ ದೂರು ದಾಖಲಾಗಿತ್ತು. ಅದರ ವಿಚಾರಣೆಯೂ ನಡೆಯುತ್ತಿತ್ತು. ಪ್ರಕಾಶ್ ರೈ ಅವರು ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲಿ ಒಂದು, ಚೆನ್ನೈನ ವಲಚೆರಿಯಲ್ಲಿ ಎರಡು, ತೆಲಂಗಾಣದ ಸೆರಿಲಿಂಗಪಲ್ಲಿಯ ಮತದಾರರ ಪಟ್ಟಿಗಳಲ್ಲಿ ಹೆಸರು ಹೊಂದಿದ್ದಾರೆ ಎಂದು ಆರೋಪ ಮಾಡಲಾಗಿದೆ.