ಮುಂಬೈ, ಆ. 12 (DaijiworldNews/AA): ಪರೀಕ್ಷಾ ಹಗರಣಗಳ ಕುರಿತು ವಿದ್ಯಾರ್ಥಿ ಪ್ರತಿಭಟನೆಗೆ ಬಾಲಿವುಡ್ನಿಂದ ಬೆಂಬಲ ಸಿಗುತ್ತಿಲ್ಲ ಎಂಬ ಹಿರಿಯ ನಟ ನಾಸಿರುದ್ದೀನ್ ಶಾ ಅವರ ಹೇಳಿಕೆ ವಿರುದ್ಧ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಕಿಡಿಕಾರಿದ್ದಾರೆ.

ಇತ್ತೀಚೆಗೆ ವಿದ್ಯಾರ್ಥಿ ಚಳವಳಿಗಳ ಬಗ್ಗೆ ಬಾಲಿವುಡ್ನ ಹಲವು ನಟರು ಮೌನವಾಗಿರುವುದನ್ನು ಪ್ರಶ್ನಿಸಿದ್ದ ನಾಸಿರುದ್ದೀನ್ ಶಾ, 'ಅವರ ಆತ್ಮಸಾಕ್ಷಿ ಹೇಳಿದಾಗ ಅವರು ಮಾತನಾಡುತ್ತಾರೆ. ಬಾಯಲ್ಲಿ ಮೂಳೆ ಇರುವ ನಾಯಿ ಬೊಗಳಲು ಸಾಧ್ಯವಿಲ್ಲ ಎಂಬ ಮಾತಿದೆ' ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಂಗನಾ, ನಟ ಪಿಯೂಷ್ ಮಿಶ್ರಾ ಅವರು ನಾಸಿರುದ್ದೀನ್ ಶಾ ಅವರ ಹೇಳಿಕೆ ಬಗ್ಗೆ ನೀಡಿದ್ದ ಪ್ರತಿಕ್ರಿಯೆಯ ವಿಡಿಯೋವನ್ನು ಹಂಚಿಕೊಂಡು ತಮ್ಮ ಅಭಿಪ್ರಾಯವನ್ನೂ ಬರೆದಿದ್ದಾರೆ. "ಇಂದಿನ ಕಾಲದಲ್ಲಿ ಯಾರನ್ನಾದರೂ ನಾಯಿ ಎಂದು ಕರೆಯುವುದು ಕೂಡ ಮೆಚ್ಚುಗೆಯೇ. ಏಕೆಂದರೆ ನಿಷ್ಠೆ ಮತ್ತು ಮುಗ್ಧತೆ ಇಂದು ಬಹಳ ಅಪರೂಪ. ನಾಸಿರುದ್ದೀನ್ ಅವರಂತಹ ಲೋಮ್ಡಿ (ನರಿ) ಗಿಂತ ನಾನು ನಾಯಿಯಾಗಿರಲು ಇಷ್ಟಪಡುತ್ತೇನೆ" ಎಂದು ತಿಳಿಸಿದ್ದಾರೆ.