ಬೆಂಗಳೂರು,ಆ. 13 (DaijiworldNews/TA): ಖ್ಯಾತ ನಟಿ ಶಕೀಲಾ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಇತ್ತೀಚೆಗೆ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಮರಳಿರುವ ಅವರು, ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಹಂಚಿಕೊಂಡು ಆರೋಗ್ಯದ ಕುರಿತು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು ನೆಕ್ ಕಾಲರ್ ಧರಿಸುವಂತೆ ಸೂಚಿಸಿದ್ದು, ಶಕೀಲಾ ವಿಡಿಯೋದಲ್ಲಿ ನೆಕ್ ಕಾಲರ್ ಧರಿಸಿರುವುದು ಕಂಡುಬಂದಿದೆ. ತಮ್ಮ ಆರೋಗ್ಯ ಸಮಸ್ಯೆಗೆ ಅತಿಯಾದ ಮೊಬೈಲ್ ಬಳಕೆ ಹಾಗೂ ತಪ್ಪಾದ ಭಂಗಿಯಲ್ಲಿ ದೀರ್ಘಕಾಲ ಮಲಗಿದ್ದೇ ಕಾರಣ ಎಂದು ಅವರು ತಿಳಿಸಿದ್ದಾರೆ. ಶಕೀಲಾ ಹೇಳುವ ಪ್ರಕಾರ, ಅವರು ಹಾಸಿಗೆಯಲ್ಲಿ ಒಂದೇ ಮಗ್ಗಲಿಗೆ ಮಲಗಿ ಸತತವಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದರು. ಕಾಫಿ ಕುಡಿಯಲು ಮಾತ್ರ ಎದ್ದು ಬರುತ್ತಿದ್ದ ಅವರು, ಬಳಿಕ ಮತ್ತೆ ಗೇಮ್ ಆಡುತ್ತಿದ್ದರು. ನಂತರ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ರೀಲ್ಸ್ ವೀಕ್ಷಿಸುತ್ತಿದ್ದರು.
ಈ ರೀತಿಯ ದೀರ್ಘಕಾಲದ ಮೊಬೈಲ್ ಬಳಕೆ ಮತ್ತು ತಪ್ಪಾದ ಭಂಗಿಯಿಂದ ಕುತ್ತಿಗೆಯ ನರಗಳಿಗೆ ಸಮಸ್ಯೆಯಾಗಿದೆ ಎಂದು ವೈದ್ಯರು ತಿಳಿಸಿದ್ದು, ಪರಿಣಾಮವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು ಎಂದು ಶಕೀಲಾ ವಿವರಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಸುಮಾರು ರೂ.3 ಲಕ್ಷ ವೆಚ್ಚವಾಗಿದೆ ಎಂದೂ ಅವರು ಹೇಳಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಹಾಸಿಗೆಯಿಂದ ಎದ್ದೇಳಲು ಹಾಗೂ ಆಹಾರ ಸೇವಿಸಲು ಸಹಾಯದ ಅಗತ್ಯವಿದೆ ಎಂದು ಹೇಳಿರುವ ಶಕೀಲಾ, ತಮ್ಮ ಎಂದಿನ ಹಾಸ್ಯಮಯ ಶೈಲಿಯಲ್ಲೇ ಅಭಿಮಾನಿಗಳೊಂದಿಗೆ ಅನುಭವ ಹಂಚಿಕೊಂಡಿದ್ದಾರೆ. “ಫೋನ್ ತುಂಬಾ ಉಪಯುಕ್ತ ವಸ್ತು. ಆದರೆ ಅಗತ್ಯಕ್ಕಿಂತ ಹೆಚ್ಚು ಬಳಸಬೇಡಿ” ಎಂದು ಶಕೀಲಾ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಿಗೆ ಮೊಬೈಲ್ ನೀಡುವ ವಿಚಾರದಲ್ಲೂ ಪೋಷಕರಿಗೆ ಸಲಹೆ ನೀಡಿರುವ ಅವರು, ಅಗತ್ಯವಿರುವ ಕೆಲಸಗಳಿಗೆ ಮಾತ್ರ ಫೋನ್ ಬಳಸಬೇಕು. ಅನಗತ್ಯವಾಗಿ ವೀಡಿಯೊಗಳು ಹಾಗೂ ಗೇಮ್ಗಳಲ್ಲಿ ಹೆಚ್ಚು ಸಮಯ ಕಳೆಯಬಾರದು ಎಂದು ಮನವಿ ಮಾಡಿದ್ದಾರೆ. “ಅಗತ್ಯವಿಲ್ಲದ ವೀಡಿಯೊಗಳನ್ನು ನೋಡಬೇಡಿ. ಇಲ್ಲದಿದ್ದರೆ ಹಣ ಕಳೆದುಕೊಳ್ಳುವುದರ ಜೊತೆಗೆ ತಡೆಯಲಾಗದ ನೋವನ್ನು ಅನುಭವಿಸಬೇಕಾಗಬಹುದು” ಎಂದು ಶಕೀಲಾ ಹೇಳಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರು ಮೂಲದ ಶಕೀಲಾ, ಮಲಯಾಳಂ ಸಿನಿಮಾ ‘ಕಿನ್ನಾರತುಂಬಿಗಳು’ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ಬಳಿಕ ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಕನ್ನಡ ಚಿತ್ರರಂಗದಲ್ಲೂ ಅಭಿನಯಿಸಿದ್ದಾರೆ. ಕನ್ನಡದಲ್ಲಿ ‘ಕೆಂಪ’, ‘ಶ್ರೀ’, ‘ಲವ್ ಯೂ ಆಲಿಯಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.